ವಾಷಿಂಗ್ಟನ್: ಜಾಗತಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಭಾರಿ ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸದಿದ್ದರೆ ಇರಾನ್ ಪಾಲಿಗೆ ಅದು ‘ನರಕ’ವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಕಠಿಣ ಎಚ್ಚರಿಕೆ ಜಾಗತಿಕ ತೈಲ ಪೂರೈಕೆಯ ಮೇಲೆ ಆತಂಕದ ನೆರಳು ಮೂಡಿಸಿದೆ.
ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಕಚ್ಚಾ ತೈಲದ ಬೆಲೆ ಶೇ. 5ಕ್ಕೂ ಹೆಚ್ಚು ಏರಿಕೆ ಕಂಡಿದೆ. ಇದರಿಂದಾಗಿ ಭಾರತ ಸೇರಿದಂತೆ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಆರ್ಥಿಕ ಹೊರೆ ಬೀಳುವ ಭೀತಿ ಎದುರಾಗಿದೆ. “ಹಾರ್ಮುಜ್ ಜಲಸಂಧಿಯ ಮೂಲಕ ಮುಕ್ತ ಸಂಚಾರಕ್ಕೆ ಇರಾನ್ ಅಡ್ಡಿಪಡಿಸಿದರೆ, ಅವರು ಹಿಂದೆಂದೂ ಕಾಣದ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈ ಹೇಳಿಕೆಯು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಹಾರ್ಮುಜ್ ಜಲಸಂಧಿಯ ಪ್ರಾಮುಖ್ಯತೆ: ವಿಶ್ವದ ಒಟ್ಟು ತೈಲ ರಫ್ತಿನ ಸುಮಾರು ಐದನೇ ಒಂದು ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಇದನ್ನು ಬಂದ್ ಮಾಡುವುದಾಗಿ ಇರಾನ್ ಬೆದರಿಕೆ ಹಾಕುತ್ತಿರುವುದು ತೈಲ ಮಾರುಕಟ್ಟೆಯನ್ನು ಕಂಗೆಡಿಸಿದೆ.








