ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಜಾತ್ರೆಯೊಂದರಲ್ಲಿ ಸಂಭ್ರಮದ ವಾತಾವರಣವು ಕ್ಷಣಾರ್ಧದಲ್ಲಿ ಸ್ಮಶಾನ ಸದೃಶ್ಯವಾಯಿತು. ಸುಮಾರು 80 ಜನರನ್ನು ಹೊತ್ತು 60 ಅಡಿ ಎತ್ತರದಲ್ಲಿ ಸುತ್ತುತ್ತಿದ್ದ ದೈತ್ಯ ‘ಸ್ವಿಂಗ್ ರೈಡ್’ (Swing Ride) ತಾಂತ್ರಿಕ ದೋಷದಿಂದಾಗಿ ಏಕಾಏಕಿ ನೆಲಕ್ಕೆ ಅಪ್ಪಳಿಸಿದೆ. ಈ ಭೀಕರ ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ದೈತ್ಯ ಗಡಿಯಾರದ ಮುಳ್ಳಿನಂತೆ ಸುತ್ತುವ ಈ ರೈಡ್ ತನ್ನ ಗರಿಷ್ಠ ಎತ್ತರ ತಲುಪಿದ್ದಾಗ, ಅದರಲ್ಲಿದ್ದ ಹೈಡ್ರಾಲಿಕ್ ವೈರ್ ತುಂಡಾಗಿ ವೇಗವಾಗಿ ಕೆಳಕ್ಕೆ ಬಿದ್ದಿದೆ.ಅಪಘಾತದ ಭೀಕರ ದೃಶ್ಯವು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತೊಟ್ಟಿಲು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಅಲ್ಲಿದ್ದವರು ಪ್ರಾಣಭಯದಿಂದ ಕಿರುಚುತ್ತಾ ಚಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯ ಎದೆಝಲ್ಲೆನಿಸುವಂತಿದೆ.
ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ತೊಟ್ಟಿಲಿನ ತಾಂತ್ರಿಕ ನಿರ್ವಹಣೆಯನ್ನು ಸರಿಯಾಗಿ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ರೈಡ್ ನಡೆಸುವ ಮೊದಲು ಸುರಕ್ಷತಾ ಪ್ರಮಾಣಪತ್ರವನ್ನು ಪಡೆಯಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ನಿಗದಿತ ಮಿತಿಗಿಂತ ಹೆಚ್ಚು ಜನರನ್ನು ತೊಟ್ಟಿಲಿನಲ್ಲಿ ಕೂರಿಸಲಾಗಿತ್ತು ಎಂಬ ದೂರುಗಳು ಕೇಳಿಬಂದಿವೆ. ಇದರಿಂದಾಗಿ ರೈಡ್ನ ಯಾಂತ್ರಿಕ ವ್ಯವಸ್ಥೆಯ ಮೇಲೆ ಅತಿಯಾದ ಒತ್ತಡ ಬಿದ್ದಿದೆ ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ಜಾತ್ರೆಯ ಆಯೋಜಕರು ಮತ್ತು ರೈಡ್ ಮಾಲೀಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.
🚨 Kushinagar, UP: A 60-ft swing ride collapsed at Bhaisaha Mela late Wednesday night, injuring around 30 people, including women and children.
The ride was carrying nearly 70–80 people and had completed only a couple of rounds.pic.twitter.com/7ZJ79NyURW
— Megh Updates 🚨™ (@MeghUpdates) April 4, 2026








