ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ನೇರ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಇರಾನ್‌ನ ಇಸ್ಫಹಾನ್ (Isfahan) ಪ್ರಾಂತ್ಯದಲ್ಲಿ ಅಮೆರಿಕದ ಪೈಲಟ್ ರಕ್ಷಣೆಗಾಗಿ ನಡೆಸಲಾಗುತ್ತಿದ್ದ ಕಾರ್ಯಾಚರಣೆಯ ಮೇಲೆ ಇರಾನ್ ಪಡೆಗಳು ದಾಳಿ ನಡೆಸಿದ್ದು, ಅಮೆರಿಕದ ಎರಡು ಸಿ-130 (C-130) ಸಾರಿಗೆ ವಿಮಾನ ಹಾಗೂ ಎರಡು ಬ್ಲ್ಯಾಕ್ ಹಾಕ್ (Black Hawk) ಹೆಲಿಕಾಪ್ಟರ್‌ಗಳನ್ನು ಹೊಡೆದು ಉರುಳಿಸಿರುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಘೋಷಿಸಿದೆ.
ಇರಾನ್‌ನ ವಾಯುಪಡೆ, ಭೂಸೇನೆ ಮತ್ತು ಬಸಿಜ್ ಪಡೆಗಳು ಜಂಟಿಯಾಗಿ ಈ ದಾಳಿ ನಡೆಸಿವೆ. ಇಸ್ಫಹಾನ್‌ನ ದಕ್ಷಿಣ ಭಾಗದಲ್ಲಿರುವ ಕೈಬಿಟ್ಟ ವಿಮಾನ ನಿಲ್ದಾಣವೊಂದರಲ್ಲಿ ಅಮೆರಿಕದ ಈ ವಿಮಾನಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ನಾಪತ್ತೆಯಾಗಿದ್ದ ಅಮೆರಿಕದ ಎರಡನೇ ಪೈಲಟ್ ರಕ್ಷಣೆಗಾಗಿ ಈ ವಿಮಾನಗಳು ಬಂದಿದ್ದವು. ಆದರೆ ಅಮೆರಿಕದ ಈ ಯೋಜನೆಯನ್ನು ನಾವು ವಿಫಲಗೊಳಿಸಿದ್ದೇವೆ ಎಂದು ಇರಾನ್ ಸೇನೆಯ ವಕ್ತಾರ ಇಬ್ರಾಹಿಂ ಜೊಲ್ಪಘಾರಿ ತಿಳಿಸಿದ್ದಾರೆ.
ಧ್ವಂಸಗೊಂಡ ವಿಮಾನಗಳ ಅವಶೇಷಗಳ ಫೋಟೋಗಳನ್ನು ಇರಾನ್‌ನ ಸರ್ಕಾರಿ ಟೆಲಿವಿಷನ್ ‘ಪ್ರೆಸ್ ಟಿವಿ’ ಹಂಚಿಕೊಂಡಿದ್ದು, ಅವು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ.








