ವಾಷಿಂಗ್ಟನ್: ಅಮೆರಿಕದ ವೈಟ್ ಹೌಸ್ ಎದುರಿಗಿರುವ ಲಫಾಯೆಟ್ ಪಾರ್ಕ್ (Lafayette Park) ಬಳಿ ಭಾನುವಾರ ಮಧ್ಯರಾತ್ರಿ ಗುಂಡಿನ ಚಕಮಕಿ ನಡೆದ ವರದಿಯಾಗಿದ್ದು, ಭದ್ರತಾ ವಲಯದಲ್ಲಿ ಭಾರಿ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ (Secret Service) ದೃಢಪಡಿಸಿದೆ.
ಭಾನುವಾರ (ಏಪ್ರಿಲ್ 5, 2026) ಬೆಳಗಿನ ಜಾವ ಸುಮಾರು 12:30ರ ಸುಮಾರಿಗೆ ಲಫಾಯೆಟ್ ಪಾರ್ಕ್ ಬಳಿ ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಅಧಿಕಾರಿಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.
ಗುಂಡಿನ ಸದ್ದು ಕೇಳಿಬಂದ ತಕ್ಷಣ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಪಾರ್ಕ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಶಂಕಿತ ವ್ಯಕ್ತಿ ಅಥವಾ ಸಂತ್ರಸ್ತರು ಸ್ಥಳದಲ್ಲಿ ಪತ್ತೆಯಾಗಿಲ್ಲ.ಘಟನೆಗೆ ಸಂಬಂಧಿಸಿದಂತೆ ಸೀಕ್ರೆಟ್ ಸರ್ವಿಸ್ ಈಗ ವಾಷಿಂಗ್ಟನ್ ಡಿಸಿ ಪೊಲೀಸರು ಮತ್ತು ಯುಎಸ್ ಪಾರ್ಕ್ ಪೊಲೀಸರೊಂದಿಗೆ ಜಂಟಿ ತನಿಖೆ ನಡೆಸುತ್ತಿದೆ. ಶಂಕಿತ ವಾಹನ ಮತ್ತು ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ








