ಟೆಹ್ರಾನ್: ಇರಾನ್ ಭೂಪ್ರದೇಶದಲ್ಲಿ ಪತನಗೊಂಡಿದ್ದ ಎಫ್-15 ಯುದ್ಧ ವಿಮಾನದ ಪೈಲಟ್‌ಗಳನ್ನು ಸಾಹಸಮಯವಾಗಿ ರಕ್ಷಿಸಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ತೀವ್ರವಾಗಿ ಲೇವಡಿ ಮಾಡಿದೆ. ಇದು ಅಮೆರಿಕದ ಸೇನಾ ಹಿನ್ನಡೆಯನ್ನು ಮುಚ್ಚಿ ಹಾಕಲು ಟ್ರಂಪ್ ಮಾಡುತ್ತಿರುವ ‘ಹತಾಶ ಪ್ರಯತ್ನ’ ಎಂದು ಇರಾನ್ ವಿದೇಶಾಂಗ ಇಲಾಖೆ ವ್ಯಂಗ್ಯವಾಡಿದೆ.
ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನ ಪತನಗೊಂಡಿರುವುದು ಶ್ವೇತಭವನಕ್ಕೆ ನುಂಗಲಾರದ ತುತ್ತಾಗಿದೆ. ಈ ಕಹಿಯಾದ ಸೋಲನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳಲು ಟ್ರಂಪ್ ‘ರಕ್ಷಣಾ ಕಾರ್ಯಾಚರಣೆ’ಯ ಕಟ್ಟುಕಥೆ ಹೇಳುತ್ತಿದ್ದಾರೆ ಎಂದು ಇರಾನ್ ಆರೋಪಿಸಿದೆ.ಇರಾನ್‌ನ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಅಮೆರಿಕದ ಪಡೆಗಳು ಪೈಲಟ್ ಅನ್ನು ಕರೆದೊಯ್ದಿವೆ ಎಂಬುದು ಸುಳ್ಳು. ಅಮೆರಿಕ ತನ್ನ ಸೇನಾ ವೈಫಲ್ಯವನ್ನು ಮುಚ್ಚಿ ಹಾಕಲು ಈ ರೀತಿ ಪ್ರಚಾರ ಮಾಡುತ್ತಿದೆ ಎಂದು ಟೆಹ್ರಾನ್ ಹೇಳಿದೆ.
“ಟ್ರಂಪ್ ಅವರು ವಾಸ್ತವವನ್ನು ಒಪ್ಪಿಕೊಳ್ಳುವ ಬದಲು ಕಾಲ್ಪನಿಕ ವಿಜಯವನ್ನು ಸಂಭ್ರಮಿಸುತ್ತಿದ್ದಾರೆ” ಎಂದು ಇರಾನ್ ಸರ್ಕಾರದ ವಕ್ತಾರರು ಟೀಕಿಸಿದ್ದಾರೆ.








