ಟೆಹ್ರಾನ್: ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಬಂದ್ ಮಾಡಿರುವ ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡಾಮಂಡಲರಾಗಿದ್ದಾರೆ. ಏಪ್ರಿಲ್ 6ರ ಗಡುವು ಮುಗಿಯಲು ಕೇವಲ ಒಂದು ದಿನ ಬಾಕಿ ಇರುವಾಗ ಪ್ರಬಲ ಎಚ್ಚರಿಕೆ ನೀಡಿರುವ ಅವರು, “ತಕ್ಷಣವೇ ಆ ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ಇರಾನ್ ನರಕ ಸದೃಶ ಪರಿಸ್ಥಿತಿ ಎದುರಿಸಬೇಕಾಗುತ್ತದೆ” ಎಂದು ಗುಡುಗಿದ್ದಾರೆ.
ಅಂತರಾಷ್ಟ್ರೀಯ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇರಾನ್ ನಿಲುವನ್ನು ಟ್ರಂಪ್ ತರಾಟೆಗೆ ತೆಗೆದುಕೊಂಡಿದ್ದಾರೆ. “Open the f-ing strait” (ಆ ಜಲಸಂಧಿಯನ್ನು ಕೂಡಲೇ ತೆರೆಯಿರಿ) ಎಂದು ಅತ್ಯಂತ ಆಕ್ರೋಶಭರಿತವಾಗಿ ಹೇಳಿಕೆ ನೀಡುವ ಮೂಲಕ ಯುದ್ಧದ ಮುನ್ಸೂಚನೆ ನೀಡಿದ್ದಾರೆ.
ಒಂದು ವೇಳೆ ಇರಾನ್ ತನ್ನ ಪಟ್ಟು ಸಡಿಲಿಸದಿದ್ದರೆ, ಹಿಂದೆಂದೂ ಕಾಣದಂತಹ ಭೀಕರ ಸೈನಿಕ ದಾಳಿಯನ್ನು ಎದುರಿಸಬೇಕಾಗುತ್ತದೆ ಮತ್ತು ಇಡೀ ದೇಶವೇ ನರಕವಾಗಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಏಪ್ರಿಲ್ 6ರ ಡೆಡ್‌ಲೈನ್: ಅಮೆರಿಕ ವಿಧಿಸಿರುವ ಗಡುವು ನಾಳೆ (ಏಪ್ರಿಲ್ 6) ಮುಕ್ತಾಯಗೊಳ್ಳಲಿದೆ. ಈ ಸಮಯದ ನಂತರ ಅಮೆರಿಕದ ನೌಕಾಪಡೆ ಮತ್ತು ವಾಯುಪಡೆ ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.







