ಮಂಡ್ಯ : ಗ್ರಾಮಗಳ ಅಭಿವೃದ್ಧಿಗೋಸ್ಕರ 4 ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರಿಸಲಾಗಿದೆಯೇ ಹೊರತು ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ ಎಂಬುವುದನ್ನು ಸ್ಥಳಿಯ ಗ್ರಾಮಸ್ಥರುಗಳು ಅರ್ಥಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ಸ್ಪಷ್ಟಪಡಿಸಿದರು.
ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದಲ್ಲಿ ಶನಿವಾರ 8.15 ಕೋಟಿ ರೂ ವೆಚ್ಚದಲ್ಲಿ ಬಿ.ಎಂ.ರಸ್ತೆಯಿಂದ ಮರಕಾಡುದೊಡ್ಡಿ, ಗೊರವನಹಳ್ಳಿ ಮುಖಾಂತರ ಮದ್ದೂರು ಕ್ರೀಡಾಂಗಣ ಬಳಿ ಪೇಟೆ ಬೀದಿ ಸೇರಿರುವ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೆಜ್ಜಲಗೆರೆ, ಗೊರವನಹಳ್ಳಿ ಸೇರಿದಂತೆ ನಾಲ್ಕು ಗ್ರಾಮ ಪಂಚಾಯಿತಿಗಳ ಕೆಲವು ಗ್ರಾಮಗಳು ನಗರ ಸಭೆಗೆ ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಸೌಕರ್ಯಗಳು ಸಿಗಲಿದೆ. ಗ್ರಾಮಗಳ ಅಭಿವೃದ್ಧಿಗೋಸ್ಕರ 4 ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸಲಾಗಿದೇ ಹೊರತು ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ ಎಂಬುವುದನ್ನು ಸ್ಥಳಿಯ ಗ್ರಾಮಸ್ಥರುಗಳು ಅರ್ಥಮಾಡಿಕೊಳ್ಳಬೇಕು ಎಂದರು.
ಕೆಲ ರಾಜಕೀಯ ಪಕ್ಷಗಳ ಮುಖಂಡರು ಮಾಡುತ್ತಿರುವ ರಾಜಕೀಯ ದುರುದ್ದೇಶಗಳಿಂದ ಕೆಲವು ಮುಗ್ದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಂತವರ ಮಾತುಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಬೇರೆ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ನಾವು 25 ವರ್ಷ ಹಿಂದೆ ಉಳಿದಿದ್ದೇವೆ ಎಂಬುವುದು ಅರ್ಥವಾಗುತ್ತದೆ ಹಾಗೆ ನೋಡಿದರೆ ಜನರ ಮನಸ್ಥಿತಿಗಳು ಹಾಗೆ ಇರುವುದು ಕಾರಣ ಎಂದೆನಿಸುತ್ತದೆ. ಬೇರೆ ಮುಂದುವರೆದ ದೇಶಗಳಿಗೆ ಹೋಲಿಸಿ ನೋಡಿದರೆ ಶೇ.10 ರಷ್ಟು ಕೂಡ ಅಭಿವೃದ್ಧಿಯಾಗಿಲ್ಲ ಎಂಬುವುದನ್ನು ನಗರಸಭೆಗೆ ವಿರೋಧ ಮಾಡುವವರು ಅರ್ಥ ಮಾಡಿಕೊಳ್ಳಬೇಕಾಗಿದೆ. 8 ರಿಂದ 10 ಬಾರಿ ಶಾಸಕರಾಗಿರುವವರ ಕ್ಷೇತ್ರಗಳಿಗೂ ರಾಜ್ಯ ಸರ್ಕಾರ ಇಷ್ಟೊಂದು ಅನುದಾನ ನೀಡಿಲ್ಲ. ಆದರೆ, ಮದ್ದೂರು ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಮನವಿ ಹಾಗೂ ಸತತ ಪರಿಶ್ರಮದಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಅವರ ಕ್ಷೇತ್ರಗಳಿಗೆ ನೀಡಿದ್ದಂತೆ ಹೆಚ್ಚಿನ ಅನುದಾನಗಳನ್ನು ನೀಡುತ್ತಿರುವುದರಿಂದ ಕೇವಲ ಮೂರೇ ವರ್ಷಗಳಲ್ಲಿ 1900 ಕೋಟಿ ರೂ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ ಎಂದರು.
ನನಗೆ ಅಧಿಕಾರ ಮುಖ್ಯವಲ್ಲ. ನನ್ನ ಕ್ಷೇತ್ರವನ್ನು ಅಭಿವೃದ್ದಿ ಮಾಡುವುದಷ್ಟೆ ನನ್ನ ಗುರಿಯಾಗಿದ್ದು, ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದ ಅವರು, ಗೊರವನಹಳ್ಳಿ ನಗರಸಭೆಗೆ ಸೇರ್ಪಡೆಯಾಗಿರುವುದರಿಂದ ಗ್ರಾಮದ ಹಾಲಿನ ಡೈರಿಯಾಗಲಿ, ರೈತರ ಸೊಸೈಟಿಯಾಗಲಿ ಗ್ರಾಮದಿಂದ ಬೇರೆ ಎಲ್ಲಿಗೂ ಸ್ಥಳಾಂತರವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಗೊರವನಹಳ್ಳಿಯ ಅಭಿವೃದ್ದಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು. ಅಷ್ಟೇ ಅಲ್ಲದೆ ನಗರಸಭೆಯಲ್ಲಿ ಗ್ರಾಮಸ್ಥರು ತಮ್ಮ ಅಸ್ತಿ ಬಗೆಗಿನ ಇ-ಖಾತಾ ಸೌಕರ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಗ್ರಾಮಸ್ಥರು ಕಟ್ಟುತ್ತಿದ್ದ ಆಸ್ತಿ ಕಂದಾಯವನ್ನಷ್ಟೆ ಕಟ್ಟ ಬೇಕೆ ಹೊರತು ಅದಕ್ಕೂ ಹೆಚ್ಚಿನ ಕಂದಾಯ ಕಟ್ಟುವಂತಿಲ್ಲ ಎಂದು ತಿಳಿಸಿದರು.

ನಗರಸಭೆ ವಿರೋಧಿಸಿ ಗೊರವನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಶನಿವಾರ ಶಾಸಕ ಕೆ.ಎಂ.ಉದಯ್ ಗೊರವನಹಳ್ಳಿಗೆ ಭೂಮಿ ಪೂಜೆ ನೆರವೇರಿಸಲು ಬಂದ ವೇಳೆಯೇ ಗ್ರಾಮದ ಕೆಲವು ಗ್ರಾಮಸ್ಥರು ಮದ್ದೂರು ನಗರಸಭೆಗೆ ಗೊರವನಹಳ್ಳಿಯನ್ನು ಸೇರ್ಪಡೆಗೊಳಿಸಿರುವುದರ ವಿರುದ್ಧ ಬೇಡವೇ ಬೇಡ ನಗರಸಭೆ ಬೇಡ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಈ ವೇಳೆ ಒಂದೆ ಸ್ಥಳದಲ್ಲಿ ರಸ್ತೆ ಅಭಿವೃದ್ದಿಗೆ ಚಾಲನೆ ಹಾಗೂ ನಗರಸಭೆ ಸೇರ್ಪಡೆಗೆ ವಿರೋಧಿಸಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಪಿಐಗಳಾದ ನವೀನ್ ಕುಮಾರ್ ಹಾಗೂ ನಾರಾಯಣಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ನಿಯೋಜಿಸಲಾಗಿತ್ತು.
ಗೊರವನಹಳ್ಳಿ ಪ್ರಸನ್ನ ಮಾತನಾಡಿ, ಗೊರವನಹಳ್ಳಿ ಗ್ರಾಮವನ್ನು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗ್ರಾಪಂ ಆವರಣದಲ್ಲಿ 86 ದಿನಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ ಹಾಗೂ ಕೆಲ ದಿನಗಳ ಹಿಂದೆ ಅಧಿಕಾರಿಗಳು ಹಾಗೂ ಪೊಲೀಸರು ಕಡತಗಳನ್ನು ಗ್ರಾಪಂ ಕಚೇರಿಯಿಂದ ಬಲವಂತವಾಗಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪೋಲಿಸರು ಗ್ರಾಮದ ಮಹಿಳೆಯರ ಮೇಲೆ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿದಾಗ ಕೆಲವರು ಗಾಯಗೊಂಡಿದ್ದರು. ಸೌಜನ್ಯಕ್ಕಾದರೂ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಮಾಡುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ನಮ್ಮ ವಿರೋಧವಿಲ್ಲ. ನಗರಸಭೆಗೆ ಗೊರವನಹಳ್ಳಿ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ನಗರಸಭೆಯಿಂದ ಗೊರವನಹಳ್ಳಿ ಗ್ರಾಮ ಪಂಚಾಯಿತಿಯನ್ನು ಕೈ ಬಿಡುವವರೆಗೂ ನಮ್ಮ ಅನಿರ್ಧಿಷ್ಟಾವಧಿ ಮುಷ್ಕರ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ನಗರಸಭೆ ಪೌರಾಯುಕ್ತೆ ರಾಧಿಕಾ, ಡಿಸಿಸಿ ಬ್ಯಾಂಕ್ ನಿರ್ದೆಶಕ ಪಿ.ಸಂದರ್ಶ, ಮನ್ಮುಲ್ ನಿರ್ದೆಶಕ ಹರೀಶ್ ಬಾಬು ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಎಂ.ಡಿ.ಮಹಾಲಿಂಗಯ್ಯ, ಮೋಹನ್ ಕುಮಾರ್, ರಾಘವ್, ಮಧು, ಶಿವರಾಮು, ಪುಟ್ಟಸ್ವಾಮಿ, ಬೋರೇಗೌಡ, ಶಿವರಾಮು, ಜವರೇಗೌಡ, ಶಿವಪ್ಪ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
SC, ST ಜನಾಂಗದ ಸಮಸ್ಯೆಗಳಿಗೆ ತಾಲೂಕು ಹಂತದಲ್ಲೇ ಪರಿಹಾರಕ್ಕೆ ಕ್ರಮ: ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ
BIG Alert: ‘ಆನ್ಲೈನ್’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!








