ಬೆಂಗಳೂರು : ಒಂದು ಕಡೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಿಲಿಂಡರ್ ಇಲ್ಲದೆ ಜನ ಪರದಾಡುತ್ತಿದ್ದು, ಗ್ಯಾಸ್ ಸಿಲಿಂಡರ್ ಪಡೆಯಲು ಏಜೆನ್ಸಿ ಅಂಗಡಿ ಮುಂದೆ ನಿಲ್ಲುತ್ತಿದ್ದಾರೆ. ಆದರೆ ಮತ್ತೊಂದು ಕಡೆ ನಾಳೆ ಆರ್‌ಸಿಬಿ ಹಾಗೂ ಚೆನ್ನೈ ನಡುವೆ ಹೈ ವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ಶಾಸಕರ ಪಿಎಗಳು ಟಿಕೆಟ್ ಗಾಗಿ ವಿಧಾನಸೌಧದಲ್ಲಿ ಕ್ಯೂ ನಿಂತಿರುವುದು ತಿಳಿದುಬಂದಿದೆ.
ಹೌದು ರಾಜ್ಯಾದ್ಯಂತ ಗ್ಯಾಸ್ ಗಾಗಿ ಆಟೋ ಚಾಲಕರು ಕ್ಯೂ ನಿಲ್ಲುತ್ತಿದ್ದಾರೆ ಆದರೆ ಐಪಿಎಲ್ ಟಿಕೆಟ್ ಗಾಗಿ ಶಾಸಕರ ಪಿಎಗಳು ಸಾಲು ನಿಂತಿದ್ದಾರೆ. ಜನಸಾಮಾನ್ಯರಿಗೆ ಜೀವನ ನಡೆಸುವ ಚಿಂತೆ ಒಂದೆಡೆ ಆದರೆ ಇತ್ತ ಶಾಸಕರ ಪಿಎ ಗಳಿಗೆ ಐಪಿಎಲ್ ಎಂಜಾಯ್ ಮಾಡುವ ಆಸೆಯಾಗಿದೆ. ಪ್ರತಿ ಶಾಸಕರಿಗೆ 3 ಐಪಿಎಲ್ ಟಿಕೆಟ್ ಉಚಿತ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯಲು ವಿಧಾನಸೌಧದಲ್ಲಿ ಶಾಸಕರ ಪಿಎಗಳು ನಿಂತಿದ್ದಾರೆ.
ಸಭಾಧ್ಯಕ್ಷರ, ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ. ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಶಾಸಕರಿಗೆ ಚಲಮರೂ ಐಪಿಎಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಜನರು ಸಿಲಿಂಡರ್ ಇಲ್ಲದೆ ಕಂಗಾಲು ಆಗಿದ್ದಾರೆ. ಆದರೆ ಶಾಸಕರಿಗೆ ಕ್ರಿಕೆಟ್ ಪಂದ್ಯಕ್ಕಾಗಿ ಟಿಕೆಟ್ ಪಡೆದು ಮೋಜು ಮಸ್ತಿ ಮಾಡುತ್ತಿದ್ದಾರೆ.
ಸಿಲಿಂಡರ್ ಇಲ್ಲದೆ ಜನರ ಪರದಾಟ
ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಬುಕ್ ಮಾಡಿದರೂ ಸಕಾಲಕ್ಕೆ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಹೋಟೆಲ್ ಉದ್ಯಮ ಕೂಡ ಈ ಕೊರತೆಯಿಂದ ಕಂಗೆಟ್ಟಿದ್ದು, ಹಲವು ಸಣ್ಣ ಹೋಟೆಲ್‌ಗಳು ಮುಚ್ಚುವ ಭೀತಿಯಲ್ಲಿವೆ. ಬೆಲೆ ಏರಿಕೆಯ ನಡುವೆ ಸಿಲಿಂಡರ್ ಸಿಗದೆ ಗೃಹಿಣಿಯರು ಒಲೆ ಹಚ್ಚಲು ಪರದಾಡುವಂತಾಗಿದೆ.
ಐಪಿಎಲ್ ಟಿಕೆಟ್‌ಗಾಗಿ ‘ವಿಐಪಿ’ ಸರ್ಕಸ್!
ಇತ್ತ ರಾಜ್ಯದ ಜನರು ಮೂಲಭೂತ ಅವಶ್ಯಕತೆಗಳಿಗಾಗಿ ಕ್ಯೂ ನಿಂತಿದ್ದರೆ, ವಿಧಾನಸೌಧದ ಗಲ್ಲಿಗಳಲ್ಲಿ ಐಪಿಎಲ್ ಟಿಕೆಟ್‌ಗಳದ್ದೇ ಸದ್ದು. “ನಾವು ವಿಐಪಿಗಳು, ನಮಗೆ ಕ್ಯೂ ನಿಲ್ಲಲು ಸಾಧ್ಯವಿಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಶಾಸಕರು, ತಮ್ಮ ಕುಟುಂಬ ಮತ್ತು ಬೆಂಬಲಿಗರಿಗಾಗಿ ಐಪಿಎಲ್ ಟಿಕೆಟ್ ಪಡೆಯಲು ತಮ್ಮ ಆಪ್ತ ಸಹಾಯಕರನ್ನು (PA) ಕೆ.ಎಸ್.ಸಿ.ಎ (KSCA) ಕಚೇರಿಗೆ ನಿಯೋಜಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗಾಗಿ ಪ್ರತಿಯೊಬ್ಬ ಶಾಸಕರಿಗೂ ಕನಿಷ್ಠ 4 ರಿಂದ 5 ವಿಐಪಿ ಪಾಸ್‌ಗಳನ್ನು ನೀಡಬೇಕೆಂಬ ಬೇಡಿಕೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜನಸಾಮಾನ್ಯರು ಆನ್‌ಲೈನ್‌ನಲ್ಲಿ ಟಿಕೆಟ್ ಸಿಗದೆ ಪರದಾಡುತ್ತಿದ್ದರೆ, ಶಾಸಕರ ಪಿಎಗಳು ಟಿಕೆಟ್ ಬ್ಲಾಕ್ ಮಾಡಲು ಕಸರತ್ತು ನಡೆಸುತ್ತಿರುವುದು ಕಂಡುಬಂದಿದೆ.








