ಮಂಡ್ಯ : ವ್ಯವಸಾಯದ ಉದ್ದೇಶಕ್ಕಾಗಿ ಆಗಾಗ್ಗೆ ನೀರಾವರಿ ಕಛೇರಿಗಳ ಮುಂದೆ ರೈತರು ನಡೆಸುತ್ತಿದ್ದ ಪ್ರತಿಭಟನೆಗಳು ಇನ್ನು ಮುಂದೆ ನಡೆಯುವುದಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಮದ್ದೂರು ಕೆರೆಯಡಿ ಬರುವ ವೈದ್ಯನಾಥ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತಲೆದೋರಿರುವ ಪ್ರಮುಖವಾದ ಸಮಸ್ಯೆ ಎಂದರೇ ರೈತರು ನೀರಿಗಾಗಿ ಪ್ರತಿಭಟನೆ ಮಾಡುತ್ತಿರುವುದು. ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಾಲೆಗಳ ಆಧುನೀಕರಣ ಕಾಮಗಾರಿ ಮಾಡದಿರುವುದೇ ಇಷ್ಟೆಲ್ಲಾ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ಇನ್ನು ಮುಂದೆ ರೈತರು ಯಾವುದೇ ನೀರಾವರಿ ಕಛೇರಿ, ರಸ್ತೆ ತಡೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವ ಸನ್ನಿವೇಶ ಉಂಟಾಗುವುದಿಲ್ಲ. ಇನ್ನೊಂದು ವರ್ಷದಲ್ಲಿ ನಾಲೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಂಡು ರೈತರಿಗೆ ಅನುಕೂಲವಾಗಲಿದೆ ಎಂದರು.
ಮದ್ದೂರು ಕೆರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೆಮ್ಮಣ್ಣು ನಾಲಾ, ವೈದ್ಯನಾಥ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಈಗಾಗಲೇ ಸರ್ಕಾರದಿಂದ 150 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಕೆಮ್ಮಣ್ಣು ನಾಲೆಯನ್ನು 100 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಂಡು ಮುಂಗಾರು ಬೆಳೆ ವೇಳೆಗೆ ರೈತರ ಬೇಸಾಯಕ್ಕೆ ನೀರನ್ನು ಒದಗಿಸಲಾಗುವುದು ಎಂದರು.

ಅದೇ ರೀತಿ ಮದ್ದೂರು ನಗರದಲ್ಲಿ ಹಾದು ಹೋಗುವ ವೈದ್ಯನಾಥ, ಬೈರನ್ ನಾಲೆಗಳು ಕೂಡ ದೊಡ್ಡ ಮೋರಿಗಳಾಗಿ ಮಾರ್ಪಾಡಾಗಿದ್ದು, ಹೀಗಾಗಿ ಅವುಗಳನ್ನು ಸ್ವಚ್ಚ, ಸೌಂದರ್ಯಕರಣವಾಗಿ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡಿ 50 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ನಾಲೆಗಳ ಆಧುನಿಕರಣ ಕಾಮಗಾರಿ ನಾಳೆಯಿಂದಲೇ ಪ್ರಾರಂಭವಾಗಲಿದ್ದು, ಈ ಎರಡು ನಾಲೆಗಳು 6 ಕಿ.ಮೀ ವ್ಯಾಪ್ತಿಯ 800 ಎಕರೆಗೂ ಹೆಚ್ಚು ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ನಗರದ ವ್ಯಾಪ್ತಿಯಲ್ಲಿ 2 ಕಿ.ಮೀ ಕಾಂಕ್ರೀಟ್ ರಸ್ತೆ, ಕವರ್ ಡೆಕ್ ಮಾಡಲಾಗುವುದು. ಮುಂದಿನ 15 ತಿಂಗಳಲ್ಲಿ ಈ ಮೂರು ನಾಲೆಗಳು ಅಭಿವೃದ್ಧಿ ಹೊಂದಿ ಮುಂದಿನ 50 ವರ್ಷಗಳ ಕಾಲ ರೈತರ ಬೇಸಾಯಕ್ಕೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ನಾಲೆಗಳ ಆಧುನೀಕರಣ ಮಾಡಿದರೇ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಹೀಗಾಗಿ ಹತ್ತು ಜನರಿಗೆ ಅನಾನುಕೂಲವಾದರೂ ಸಾವಿರಾರು ಜನರಿಗೆ ಒಳ್ಳೆಯದಾಗಬೇಕೆಂಬ ಉದ್ದೇಶದಿಂದ ಹಾಗೂ ವ್ಯವಸಾಯಕ್ಕೆ ನಿರಂತರವಾಗಿ ನೀರು ಹರಿಸಲು ಒತ್ತುವರಿಯಾಗಿದ್ದ 150 ಎಕರೆ ಮದ್ದೂರು ಕೆರೆಯನ್ನು ತೆರವು ಮಾಡಿ ಈಗಾಗಲೇ ಹೂಳು ತೆಗೆಯುವ ಕೆಲಸವನ್ನು ಮಾಡಲಾಗುತ್ತಿದೆ. ನಾಲೆಗಳ ಆಧುನೀಕರಣದಿಂದ ಕೆಲವೇ ಗಂಟೆಗಳಲ್ಲಿ ನೀರು ರೈತರ ಜಮೀನುಗಳಿಗೆ ಸರಾಗವಾಗಿ ಹರಿದು ಬೇಸಾಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಸರ್ಕಾರ 800 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದು, ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಮತಾ ಶಂಕರೇಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ
ಪ್ರಸನ್ನಕುಮಾರ್, ಮಾಜಿ ಸದಸ್ಯೆ ಸರ್ವಮಂಗಳ, ನಾರಾಯಣ್, ಗೋವಿಂದ್, ಮುರಳಿ, ಶಿವರಾಜ್, ಕೆ.ಎಂ.ರವಿ, ಶಿವಚರಣ್, ಗಿರೀಶ್, ಪುನೀತ್, ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜ್ ಗುತ್ತಿಗೆದಾರ ಶ್ರೀನಿವಾಸ್, ಸದಾನಂದ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
CBSE ಹೊಸ ಪಠ್ಯಕ್ರಮ 2026-27: 9 ರಿಂದ 12ನೇ ತರಗತಿ ಪದ್ಧತಿಯಲ್ಲಿ ಭಾರಿ ಬದಲಾವಣೆ!








