ಮೈಸೂರು : ಭೂ ವ್ಯಾಜ್ಯ ಸಂಬಂಧ ಮೈಸೂರು ಜಿಲ್ಲಾಧಿಕಾರಿಗಳ ಬಂಧನಕ್ಕೆ ಕೋರ್ಟ್ ವಾರಂಟ್ ಜಾರಿ ಮಾಡಿ ಆದೇಶಿಸಿದೆ. ಹೌದು ಭೂ ವ್ಯಾಜ್ಯದ ಸಂಬಂಧ ಮೈಸೂರಿನ 1ನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದಿಂದ ಹೊರಡಿಸಿದ್ದ ಆದೇಶವನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಬಂಧನಕ್ಕೆ ವಾರಂಟ್ ಜಾರಿ ಮಾಡಲಾಗಿದೆ.
ಪ್ರಕರಣ ಹಿನ್ನೆಲೆ?
ನಗರದ ಕುಂಬಾರ ಕೊಪ್ಪಲಿನ ಸೀತಾರಾಮೇಗೌಡ ಅವರಿಗೆ ಸೇರಿದ್ದ ಹೆಬ್ಬಾಳು ಗ್ರಾಮದ ಸರ್ವೇ ನಂ.155, 159/1 ವ್ಯಾಪ್ತಿಯಲ್ಲಿ ಐದು ಎಕರೆ ಪ್ರದೇಶವನ್ನು 1980 ಸಮಯದಲ್ಲಿ ನಗರ ಭೂ ಮಿತಿ ಕಾಯಿದೆಯಡಿ ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಸೀತಾರಾಮೇಗೌಡ ಅವರ ಮಗ ಚೆಲುವೇಗೌಡ ಮತ್ತು ಮೊಮ್ಮಗ ಜಯರಾಮು ಮೈಸೂರಿನ ಒಂದನೇ ಅಪರ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ನಲ್ಲಿ ಅರ್ಜಿದಾರರ ಪರವಾಗಿ ಆದೇಶ ಬಂದಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತವು ಮೈಸೂರಿನ ಹಿರಿಯ ಸಿವಿಲ್ ನ್ಯಾಯಾಲಯದ ಮೊರೆ ಹೋಗಿತ್ತು. ಹಿರಿಯ ಸಿವಿಲ್ ನ್ಯಾಯಾಲಯ ವಿಚಾರಣೆ ನಡೆಸಿ, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ಭೂ ಮಾಲೀಕರು ತಮ್ಮ ಪರವಾಗಿ ಕೋರ್ಟ್ನಲ್ಲಿ ಬಂದ ಆದೇಶವನ್ನು ಜಾರಿಗೊಳಿಸುವ ಮೂಲಕ ಜಮೀನನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಆದರೆ, ಈವರೆಗೆ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸಿರಲಿಲ್ಲ. ಪರಿಣಾಮವಾಗಿ ಭೂ ಮಾಲೀಕರು, ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ಸೂಚನೆ ನೀಡಬೇಕು ಎಂದು ಮತ್ತೆ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಆದೇಶವನ್ನು ಪಾಲನೆ ಮಾಡದ ಜಿಲ್ಲಾಧಿಕಾರಿಗಳ ಬಂಧನಕ್ಕೆ ವಾರೆಂಟ್ ಜಾರಿಗೊಳಿಸಿ, ವಿಚಾರಣೆಯನ್ನು ಏ.24 ಮುಂದೂಡಿದ್ದಾರೆ.








