ಬೆಂಗಳೂರು : ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಬಂಧ ಹೊಂದಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಆರೋಪಿಗೆ ಮದುವೆ ಆಗಬೇಕು ಎಂಬ ಷರತ್ತು ವಿಧಿಸಿದ 20 ದಿನಗಳ ಜಾಮೀನು ನೀಡಿದೆ. ಆರೋಪಿ ಬಿಡುಗಡೆಗೆ ಕಾರಾಗೃಹಕ್ಕೆ ಆದೇಶ ನೀಡಿದ್ದು, ಮದುವೆಯಾದ ಬಳಿಕ ಪ್ರಮಾಣ ಪತ್ರ ಸಲ್ಲಿಸಲು ಆರೋಪಿಗೆ ಸೂಚನೆ ನೀಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣದ ವಿಚಿತ್ರ ಸಂಗತಿಗಳನ್ನು ಗಮನಿಸಿದ ನಂತರ ಆರೋಪಿ, ಸಂತ್ರಸ್ತೆಯನ್ನು ಮದುವೆ ಆಗಬೇಕಿರುವುದರಿಂದ ಆತನಿಗೆ ಮಧ್ಯಂತರ ಜಾಮೀನು ನೀಡುವುದು ಸೂಕ್ತವೆಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾಗಿ ಆತನನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ಆದೇಶಿಸಿದೆ.
ಜಾಮೀನು ಕೋರಿ ಮಂಡ್ಯ ಜಿಲ್ಲೆಯ ಹುಲ್ಲಗಾಲದ ಮಹದೇವ್ ಅಲಿಯಾಸ್ ಮಾದೇವ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಅರ್ಜಿದಾರರಿಗೆ ಏ.2ರಿಂದ ಏ.24 ರವರೆಗೆ ಜಾಮೀನು ನೀಡಲು ಆದೇಶಿಸಿದೆ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆರೋಪಿ ಏ.24ರೊಳಗೆ ಸಂತ್ರಸ್ತೆಯನ್ನು ವಿವಾಹವಾಗಬೇಕು ಮತ್ತು ಆನಂತರ ಮದುವೆ ನೋಂದಾಯಿಸಿದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಏ.24ಕ್ಕೆ ಮುಂದೂಡಿದೆ.








