ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಹಾಗೂ ಪಕ್ಷದ ಹೈಕಮಾಂಡ್ ನಡುವಿನ ಭಿನ್ನಮತ ಈಗ ಸ್ಫೋಟಗೊಂಡಿದೆ. ಸಂಸತ್ತಿನಲ್ಲಿ ತಮ್ಮನ್ನು ಮಾತನಾಡದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸಿರುವ ಚಡ್ಡಾ, ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, “ನನ್ನನ್ನು ಮೌನಗೊಳಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಉಪನಾಯಕನ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ತೆಗೆದುಹಾಕಲು ಪಕ್ಷವು ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದೆ. ಅವರ ಜಾಗಕ್ಕೆ ಪಂಜಾಬ್‌ನ ಮತ್ತೊಬ್ಬ ಸಂಸದ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಸಂಸ್ಥಾಪಕ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿದೆ.
ಚಡ್ಡಾ ಪ್ರಶ್ನೆಗಳು
ನಾನು ಸಂಸತ್ತಿನಲ್ಲಿ ಸಾಮಾನ್ಯ ಜನರ ಸಮಸ್ಯೆಗಳಾದ ವಿಮಾನ ನಿಲ್ದಾಣದ ಆಹಾರದ ಬೆಲೆ, ಝೋಮ್ಯಾಟೋ ಮತ್ತು ಬ್ಲಿಂಕಿಟ್ ಕಾರ್ಮಿಕರ ಸಂಕಷ್ಟ, ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆ ಬಗ್ಗೆ ಧ್ವನಿ ಎತ್ತಿದ್ದೇನೆ. ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಮಾತನಾಡುವುದು ತಪ್ಪೇ? ನನ್ನ ಹಕ್ಕನ್ನು ಕಸಿದುಕೊಳ್ಳಲು ಯಾರಿಗೆ ಅಧಿಕಾರವಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಶಾಯರಿ ಮೂಲಕ ಎಚ್ಚರಿಕೆ: ತಮ್ಮ ಭಾಷಣದ ತುಣುಕುಗಳನ್ನು ಹಂಚಿಕೊಂಡಿರುವ ಅವರು, ವಿಡಿಯೋದ ಕೊನೆಯಲ್ಲಿ ಹಿಂದಿ ಶಾಯರಿಯೊಂದನ್ನು ಉಲ್ಲೇಖಿಸಿದ್ದಾರೆ:
“ಮೇರಿ ಖಾಮೋಶಿಕೋ ಮೇರಿ ಹಾರ್ ಮತ್ ಸಮಜ್ ಲೇನಾ, ಮೈ ವೋ ದರಿಯಾ ಹೂನ್ ಜೋ ವಕ್ತ್ ಆನೆ ಪರ್ ಸೈಲಾನ್ ಬಂತಾ ಹೈ” > (ಅರ್ಥ: ನನ್ನ ಮೌನವನ್ನು ನನ್ನ ಸೋಲು ಎಂದು ಭಾವಿಸಬೇಡಿ; ಸಮಯ ಬಂದಾಗ ಪ್ರವಾಹವಾಗಿ ಬದಲಾಗುವ ನದಿ ನಾನು).
ಹಿನ್ನೆಲೆ ಮತ್ತು ಕುತೂಹಲ:
ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ, ಕಳೆದ ಕೆಲವು ಸಮಯದಿಂದ ಪಕ್ಷದ ನಾಯಕತ್ವದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರ ಬದಲಿಗೆ ಅವರ ಪತಿಗಳೇ ಅಧಿಕಾರ ಚಲಾಯಿಸುವ (‘ಸರಪಂಚ್ ಪತಿ’) ಪದ್ಧತಿಯ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು.
ಚಡ್ಡಾ ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆಯಾದರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಿಲ್ಲ. ಪ್ರಸ್ತುತ AAP ಕೈಗೊಂಡಿರುವ ಈ ಕ್ರಮವು ಚಡ್ಡಾ ಮತ್ತು ಪಕ್ಷದ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.
Silenced, not defeated
My message to the ‘aam aadmi’
—
खामोश करवाया गया हूँ, हारा नहीं हूँ'आम आदमी’ को मेरे संदेश pic.twitter.com/poUwxsu0S3
— Raghav Chadha (@raghav_chadha) April 3, 2026








