ಇಡೀ ವಿಶ್ವದಾದ್ಯಂತ ಕ್ರೈಸ್ತ ಧರ್ಮೀಯರು ಇಂದು ಅತ್ಯಂತ ಗಂಭೀರವಾಗಿ ಮತ್ತು ಪ್ರಾರ್ಥನಾಪೂರ್ವಕವಾಗಿ ‘ಗುಡ್ ಫ್ರೈಡೇ’ ಅನ್ನು ಆಚರಿಸುತ್ತಿದ್ದಾರೆ. ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಈ ದುಃಖದ ದಿನವನ್ನು ‘ಗುಡ್’ (ಶುಭ) ಎಂದು ಏಕೀ ಕರೆಯಲಾಗುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಈ ಹೆಸರಿನ ಹಿಂದಿರುವ ಅಸಲಿ ಅರ್ಥ ಮತ್ತು ಮಹತ್ವ ಇಲ್ಲಿದೆ.
ಕ್ರೈಸ್ತ ನಂಬಿಕೆಯ ಪ್ರಕಾರ, ಲೋಕದ ಪಾಪಗಳನ್ನು ನೀಗಿಸಲು ದೇವರು ತನ್ನ ಏಕೈಕ ಮಗನಾದ ಯೇಸು ಕ್ರಿಸ್ತನನ್ನು ಭೂಮಿಗೆ ಕಳುಹಿಸಿದನು. ಯೇಸು ಕ್ರಿಸ್ತರು ಮಾನವಕುಲದ ಉದ್ದಾರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದನು.
ರೋಮನ್ ಆಡಳಿತದ ಅವಧಿಯಲ್ಲಿ, ಯೇಸು ಕ್ರಿಸ್ತರನ್ನು ಗೆತ್ಸೆಮನೆ ತೋಟದಲ್ಲಿ ಬಂಧಿಸಿ, ನಂತರ ಕ್ಯಾಲ್ವರಿ ಬೆಟ್ಟದ ಮೇಲೆ ಶಿಲುಬೆಗೇರಿಸಲಾಯಿತು. ಈ ಘಟನೆ ನಡೆದ ದಿನವೇ ಶುಕ್ರವಾರ.
’ಗುಡ್’ ಎಂದು ಕರೆಯುವುದು ಏಕೆ?: 1. ಪವಿತ್ರ ದಿನ: ಪ್ರಾಚೀನ ಇಂಗ್ಲಿಷ್‌ನಲ್ಲಿ ‘Good’ ಎಂದರೆ ‘Holy’ (ಪವಿತ್ರ) ಎಂದರ್ಥ. ಅಂದರೆ ಇದು ‘ಪವಿತ್ರ ಶುಕ್ರವಾರ’.
ಯೇಸು ಕ್ರಿಸ್ತರ ಈ ಬಲಿದಾನದಿಂದಾಗಿ ಮಾನವರಿಗೆ ಪಾಪಗಳಿಂದ ವಿಮೋಚನೆ ಸಿಕ್ಕಿತು ಮತ್ತು ದೇವರು ಹಾಗೂ ಮಾನವರ ನಡುವೆ ಮರುಸಂಬಂಧ ಏರ್ಪಟ್ಟಿತು ಎಂದು ನಂಬಲಾಗಿದೆ. ಈ ಮಹತ್ಕಾರ್ಯ ನಡೆದ ದಿನವಾದ್ದರಿಂದ ಇದನ್ನು ‘ಗುಡ್’ ಎನ್ನಲಾಗುತ್ತದೆ.
ಈ ಸಾವಿನ ಮೂರನೇ ದಿನ ಯೇಸು ಕ್ರಿಸ್ತರು ಪುನರುತ್ಥಾನಗೊಳ್ಳುತ್ತಾರೆ (ಮರಳಿ ಜೀವಂತವಾಗಿ ಏಳುತ್ತಾರೆ). ಆ ವಿಜಯಕ್ಕೆ ಈ ಬಲಿದಾನವೇ ಅಡಿಪಾಯ.
ಈ ದಿನ ಜನರು ಸಂಭ್ರಮಿಸುವುದಿಲ್ಲ. ಬದಲಾಗಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ, ಉಪವಾಸ ಮಾಡುತ್ತಾರೆ ಮತ್ತು ಯೇಸುವಿನ ತ್ಯಾಗವನ್ನು ಸ್ಮರಿಸುತ್ತಾರೆ.ಯೇಸು ಶಿಲುಬೆಯ ಮೇಲೆ ಮರಣವನ್ನಪ್ಪಿದ ಸಮಯವಾದ ಮಧ್ಯಾಹ್ನ 3 ಗಂಟೆಗೆ ಅನೇಕ ಕಡೆಗಳಲ್ಲಿ ಮೌನ ಆಚರಿಸಲಾಗುತ್ತದೆ.ಶೋಕದ ಸಂಕೇತವಾಗಿ ಅನೇಕರು ಕಪ್ಪು ಬಟ್ಟೆಯನ್ನು ಧರಿಸಿ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಗುಡ್ ಫ್ರೈಡೇ ನಮಗೆ ಕ್ಷಮೆ, ಪ್ರೀತಿ ಮತ್ತು ತ್ಯಾಗದ ಮಹತ್ವವನ್ನು ಸಾರುತ್ತದೆ. ಯೇಸು ಕ್ರಿಸ್ತನು ತನಗೆ ತೊಂದರೆ ನೀಡಿದವರನ್ನು ಕ್ಷಮಿಸಿ “ತಂದೆಯೇ, ಇವರನ್ನು ಕ್ಷಮಿಸು, ತಾವು ಏನು ಮಾಡುತ್ತಿದ್ದೇವೆಂದು ಇವರಿಗೆ ತಿಳಿದಿಲ್ಲ” ಎಂದು ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದೆ.








