ನವದೆಹಲಿ:ಜಾಗತಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಭಾರತಕ್ಕೆ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ (Crude Oil) ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆ ಮಾಡಲು ರಷ್ಯಾ ಕಂಪನಿಗಳು ಸನ್ನದ್ಧವಾಗಿವೆ ಎಂದು ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಂತುರೋವ್ ತಿಳಿಸಿದ್ದಾರೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆಯಲ್ಲಿ ಅವರು ಈ ಭರವಸೆ ನೀಡಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಭಾರತಕ್ಕೆ ತೈಲ ತರುವ ಹಡಗುಗಳಿಗೆ ಅಡ್ಡಿಯಾಗಿದೆ. ಈ ಸಮಯದಲ್ಲಿ ರಷ್ಯಾವು ಭಾರತದ ಇಂಧನ ಬೇಡಿಕೆಯನ್ನು ಪೂರೈಸಲು ತಾನು ಸಿದ್ಧವಿರುವುದಾಗಿ ಘೋಷಿಸಿದೆ.
ಗೊಬ್ಬರ ರಫ್ತಿನಲ್ಲೂ ಹೆಚ್ಚಳ: ಕೇವಲ ಇಂಧನ ಮಾತ್ರವಲ್ಲದೆ, ಭಾರತಕ್ಕೆ ಅಗತ್ಯವಿರುವ ಖನಿಜಯುಕ್ತ ಗೊಬ್ಬರಗಳ (Fertilisers) ಪೂರೈಕೆಯನ್ನು ರಷ್ಯಾ ಈಗಾಗಲೇ ಶೇ. 40ರಷ್ಟು ಹೆಚ್ಚಿಸಿದೆ. ಇದನ್ನು ಮುಂದೆಯೂ ಮುಂದುವರಿಸಲು ನಿರ್ಧರಿಸಲಾಗಿದೆ.
2030ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಏರಿಸಲು ಐದು ವರ್ಷಗಳ ಹೊಸ ‘ರೋಡ್ ಮ್ಯಾಪ್’ ಅನ್ನು ಈ ಭೇಟಿಯ ವೇಳೆ ಅನಾವರಣಗೊಳಿಸಲಾಗಿದೆ.ಹೂಡಿಕೆ, ಸಂಪರ್ಕ (Connectivity) ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಕುಡನ್ಕುಲಂ ಪರಮಾಣು ವಿದ್ಯುತ್ ಸ್ಥಾವರದ ಪ್ರಗತಿಯನ್ನು ಪರಿಶೀಲಿಸಲಾಗಿದೆ.








