ನವದೆಹಲಿ:ಭಾರತದ ಖ್ಯಾತ ಕಲಾವಿದ ರಾಜಾ ರವಿವರ್ಮ ಅವರ ಕುಂಚದಲ್ಲಿ ಅರಳಿದ ಅಪರೂಪದ ಕಲಾಕೃತಿಯೊಂದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆದಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ರವಿವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ (Yashoda and Krishna) ಪೇಂಟಿಂಗ್ ಬರೋಬ್ಬರಿ 18 ಮಿಲಿಯನ್ ಡಾಲರ್ (ಸುಮಾರು 150 ಕೋಟಿ ರೂಪಾಯಿ) ಮೊತ್ತಕ್ಕೆ ಮಾರಾಟವಾಗುವ ಮೂಲಕ ಭಾರತೀಯ ಕಲಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಕಲಾಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರತಿಷ್ಠಿತ ಹರಾಜು ಸಂಸ್ಥೆಯು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ರವಿವರ್ಮ ಅವರ ಈ ಕಲಾಕೃತಿಯು ನಿರೀಕ್ಷಿತ ಬೆಲೆಗಿಂತಲೂ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದೆ. ಈ ಮೂಲಕ ಭಾರತೀಯ ಮಾಡರ್ನ್ ಆರ್ಟ್ ವಿಭಾಗದಲ್ಲಿ ಇದು ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ತಾಯಿ ಯಶೋದೆಯು ಬಾಲಕೃಷ್ಣನನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಈ ಚಿತ್ರವು ರವಿವರ್ಮ ಅವರ ಅತ್ಯಂತ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಪಾಶ್ಚಿಮಾತ್ಯ ತೈಲಚಿತ್ರ ಕಲೆ ಮತ್ತು ಭಾರತೀಯ ಪುರಾಣಗಳ ಅದ್ಭುತ ಸಮ್ಮಿಲನ ಈ ಪೇಂಟಿಂಗ್‌ನಲ್ಲಿದೆ.19ನೇ ಶತಮಾನದ ಉತ್ತರಾರ್ಧದಲ್ಲಿ ರಚನೆಯಾದ ಈ ಚಿತ್ರವು ರಾಜಾ ರವಿವರ್ಮ ಅವರ ವಿಶಿಷ್ಟ ಶೈಲಿಯಾದ ‘ವಾಸ್ತವವಾದಿ’ (Realism) ಚಿತ್ರಕಲೆಗೆ ಅತ್ಯುತ್ತಮ ಉದಾಹರಣೆಯಾಗಿದೆ.ಇತ್ತೀಚಿನ ವರ್ಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಗೆ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಈ ಹರಾಜು ಸಾಕ್ಷಿಯಾಗಿದೆ.








