ಬೆಂಗಳೂರು : ಸಾರಿಗೆ ಸಂಸ್ಥೆಯ ನೌಕರರು ಈ ಹಿಂದೆ ನಡೆಸಿದ ಸರಣಿ ಮುಷ್ಕರಗಳ ವೇಳೆ ಕನಿಷ್ಠ ಶೇ. 25ರಷ್ಟು ವೇತನ ಹೆಚ್ಚಳ ಮಾಡಲೇಬೇಕೆಂದು ಸರ್ಕಾರಕ್ಕೆ ಪಟ್ಟು ಹಿಡಿದಿದ್ದರು. ದಶಕಗಳಿಂದ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಈ ಬಾರಿ ಪರಿಹಾರ ಸಿಗಲೇಬೇಕು ಎಂಬುದು ನೌಕರರ ಆಶಯವಾಗಿದೆ. ಸದ್ಯ ನೌಕರರ ತೀವ್ರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಅವರ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಸಾರಿಗೆ ಕ್ಷೇತ್ರದಲ್ಲಿನ ಅತೃಪ್ತಿಯನ್ನು ಶಮನ ಮಾಡಲು ಮುಂದಾಗಿದೆ.
ಹೌದು ರಾಜ್ಯ ಸಾರಿಗೆ ಸಂಸ್ಥೆಯ ಲಕ್ಷಾಂತರ ನೌಕರರು ದಶಕಗಳಿಂದ ನಡೆಸುತ್ತಾ ಬಂದಿರುವ ಸುದೀರ್ಘ ಹೋರಾಟಕ್ಕೆ ಕಾಲ ಸನ್ನಿಹಿತವಾಗಿದೆ. ಈ ಬಾರಿಯ ಬಜೆಟ್ ಘೋಷಣೆಯಂತೆ ನೌಕರರ ವೇತನ ಹೆಚ್ಚಳದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಸಾರಿಗೆ ಲೋಕದಲ್ಲಿ ಹೊಸ ಸಂಚಲನ ಮೂಡಿದೆ. ಸಾರಿಗೆ ನೌಕರರ ವೇತನ ಹೆಚ್ಚಳದ ಸಾಧಕ-ಬಾಧಕಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲು ಕೆಎಸ್ಆರ್ಟಿಸಿ (KSRTC) ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂಪಾಷ ಅವರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ.
ಬರುವ ಏಪ್ರಿಲ್ 6ರಂದು ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಎಂಡಿ ಅವರು ನೇರ ಸಮಾಲೋಚನೆ ನಡೆಸಲಿದ್ದಾರೆ. ಸಾರಿಗೆ ನೌಕರರ ವೇತನ ಹೆಚ್ಚಳದ ಅಂತಿಮ ನಿರ್ಧಾರ ಈ ಸಭೆಯಲ್ಲೇ ಹೊರಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ಏಪ್ರಿಲ್ 6ರಂದು ನಡೆಯಲಿರುವ ಈ ಸಭೆಯು ಲಕ್ಷಾಂತರ ಸಾರಿಗೆ ನೌಕರರ ಮತ್ತು ಅವರ ಕುಟುಂಬಗಳ ಪಾಲಿಗೆ ಅತ್ಯಂತ ನಿರ್ಣಾಯಕವಾಗಲಿದ್ದು, ಯುಗಾದಿ ಹಬ್ಬದ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಸಿಗುತ್ತದೆಯೇ ಎಂದು ಕಾದು ನೋಡಬೇಕಿದೆ.








