ಮುಂಬೈ:ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರಾಟಕ್ಕೆ ಸಜ್ಜಾಗಿದ್ದ ಇಂಡಿಗೋ (IndiGo) ವಿಮಾನವೊಂದರಲ್ಲಿ ‘ಅಪಾಯ’ (Danger) ಎಂಬ ಬರಹವಿದ್ದ ಚೀಟಿ ಪತ್ತೆಯಾಗಿದ್ದು, ಭಾರಿ ಭದ್ರತಾ ಆತಂಕ ಸೃಷ್ಟಿಸಿದೆ. ಈ ಘಟನೆಯಿಂದಾಗಿ ಅಹಮದಾಬಾದ್‌ಗೆ ತೆರಳಬೇಕಿದ್ದ ವಿಮಾನವು ಬರೊಬ್ಬರಿ 8 ಗಂಟೆಗಳ ಕಾಲ ವಿಳಂಬವಾಗಿದೆ.
ಮುಂಜಾನೆ ಮುಂಬೈನಿಂದ ಅಹಮದಾಬಾದ್‌ಗೆ ಹೊರಡಲು ಸಿದ್ಧವಾಗಿದ್ದ ವಿಮಾನದ ಶೌಚಾಲಯದಲ್ಲಿ ಸಣ್ಣ ಕಾಗದದ ಚೀಟಿಯೊಂದು ಪತ್ತೆಯಾಗಿತ್ತು. ಅದರಲ್ಲಿ ‘ಡೇಂಜರ್’ (Danger) ಅಥವಾ ಸ್ಫೋಟಕ ಇರುವ ಬಗ್ಗೆ ಸೂಚಿಸುವ ಸಂಶಯಾಸ್ಪದ ಬರಹವಿತ್ತು ಎನ್ನಲಾಗಿದೆ.
ಚೀಟಿ ಪತ್ತೆಯಾದ ತಕ್ಷಣ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ವಿಮಾನವನ್ನು ಪ್ರತ್ಯೇಕ ಜಾಗಕ್ಕೆ (Isolation Bay) ಒಯ್ದು ಬಾಂಬ್ ಪತ್ತೆ ದಳ (BDS) ಮತ್ತು ಶ್ವಾನ ದಳದ ಸಹಾಯದಿಂದ ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು.
ಸಂಪೂರ್ಣ ತಪಾಸಣೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಅದು ಕೇವಲ ‘ಹುಸಿ ಬಾಂಬ್ ಬೆದರಿಕೆ’ ಎಂದು ಧೃಢಪಟ್ಟಿತು. ಆದರೆ, ಈ ಪ್ರಕ್ರಿಯೆಯಿಂದಾಗಿ ಬೆಳಿಗ್ಗೆ ಹೊರಡಬೇಕಿದ್ದ ವಿಮಾನವು ಮಧ್ಯಾಹ್ನದ ನಂತರವಷ್ಟೇ ಹಾರಾಟ ನಡೆಸಲು ಸಾಧ್ಯವಾಯಿತು.
ಈ ಚೀಟಿಯನ್ನು ವಿಮಾನದೊಳಗೆ ಇಟ್ಟವರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ.








