ವಾಷಿಂಗ್ಟನ್:ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಓವಲ್ ಕಚೇರಿಯಿಂದ ರಾಷ್ಟ್ರವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡಿದರು. ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಯುದ್ಧದ ಮುಂದಿನ ಹಂತಗಳ ಬಗ್ಗೆ ಅವರು ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
“ಅಮೆರಿಕವು ಶಾಂತಿಯನ್ನು ಬಯಸುತ್ತದೆ, ಆದರೆ ನಮ್ಮ ನಾಗರಿಕರ ಮೇಲೆ ದಾಳಿಯಾದರೆ ನಾವು ಸುಮ್ಮನೆ ಕೂರುವುದಿಲ್ಲ. ಇರಾನ್‌ನ ಪ್ರಚೋದನಾಕಾರಿ ಕ್ರಮಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ನಮ್ಮ ಸೈನ್ಯ ಸಂಪೂರ್ಣ ಸನ್ನದ್ಧವಾಗಿದೆ,” ಎಂದು ಟ್ರಂಪ್ ಘೋಷಿಸಿದರು.
ಇರಾನ್ ತನ್ನ ‘ಅತಾರ್ಕಿಕ’ ನಿಲುವನ್ನು ಮುಂದುವರಿಸಿದರೆ, ಅಮೆರಿಕವು ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.ಈ ಯುದ್ಧದ ಪ್ರಯತ್ನದಲ್ಲಿ ಅಮೆರಿಕದ ಜೊತೆಗೆ ನಿಲ್ಲುವಂತೆ ತನ್ನ ಮಿತ್ರರಾಷ್ಟ್ರಗಳಿಗೆ ಕರೆ ನೀಡಿದ ಟ್ರಂಪ್, ಇದು ಜಾಗತಿಕ ಭದ್ರತೆಯ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಿಲಿಟರಿ ಕಾರ್ಯಾಚರಣೆಯ ಜೊತೆಗೆ ಇರಾನ್ ಮೇಲೆ ಹಿಂದೆಂದೂ ಕಾಣದಂತಹ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅವರು ತಿಳಿಸಿದ್ದಾರೆ.








