ಪೆಶಾವರ್:ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಲಕ್ಕಿ ಮರ್ವತ್ (Lakki Marwat) ಜಿಲ್ಲೆಯಲ್ಲಿ ಬುಧವಾರ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಭಯೋತ್ಪಾದಕರು ಪೊಲೀಸ್ ಗಸ್ತು ವಾಹನವನ್ನೇ ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಹಾಗೂ ಐವರು ನಾಗರಿಕರು ಸೇರಿದಂತೆ ಒಟ್ಟು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲೆಯ ಸೆರಾಯ್ ನೌರಂಗ್ ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಯೋತ್ಪಾದಕರು ಸ್ಫೋಟಕಗಳನ್ನು (IED) ಮೋಟಾರ್ ಸೈಕಲ್‌ಗೆ ಅಳವಡಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಪೊಲೀಸ್ ವಾಹನವು ಅಲ್ಲಿಂದ ಹಾದುಹೋಗುವಾಗ ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟಿಸಲಾಗಿದೆ.
ಗಾಯಗೊಂಡವರಲ್ಲಿ ಮೂವರು ಅಪ್ರಾಪ್ತ ಮಕ್ಕಳು ಮತ್ತು ಇಬ್ಬರು ವೃದ್ಧರು ಸೇರಿದ್ದಾರೆ. ಸ್ಫೋಟದ ತೀವ್ರತೆಗೆ ಹತ್ತಿರದ ಅಂಗಡಿ ಮುಂಗಟ್ಟುಗಳು ಮತ್ತು ವಿದ್ಯುತ್ ಕಂಬಗಳು ಜಖಂಗೊಂಡಿವೆ.
ಪೊಲೀಸರ ಗುರಿ: ಲಕ್ಕಿ ಮರ್ವತ್‌ನ ಶಹೀದ್ ಅಸ್ಮತುಲ್ಲಾ ಖಾನ್ ಖಟ್ಟಕ್ ಪೊಲೀಸ್ ಠಾಣೆಗೆ ಸೇರಿದ ಗಸ್ತು ತಂಡದ ಮೇಲೆ ಈ ದಾಳಿ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವಕ್ತಾರ ಕುದ್ರತುಲ್ಲಾ ಖಾನ್ ಖಚಿತಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಗಾಯಾಳುಗಳನ್ನು ಬನ್ನು (Bannu) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.








