ಮುಂಬೈ:ದಂಪತಿಗಳ ನಡುವಿನ ಸಾಮಾನ್ಯ ಜಗಳ ಅಥವಾ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಪತಿ ಆತ್ಮಹತ್ಯೆ ಮಾಡಿಕೊಂಡರೆ, ಅದನ್ನು ಪತ್ನಿಯು ನೀಡಿದ ‘ಆತ್ಮಹತ್ಯೆ ಪ್ರೇರಣೆ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪತಿಯ ಆತ್ಮಹತ್ಯೆಗೆ ಕಾರಣವಾದ ಆರೋಪ ಎದುರಿಸುತ್ತಿದ್ದ ಮಹಿಳೆಯನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ.
ಕೇವಲ ವೈವಾಹಿಕ ಜೀವನದಲ್ಲಿನ ಅಸಮಾಧಾನ ಅಥವಾ ಸಣ್ಣಪುಟ್ಟ ಜಗಳಗಳು ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರೇರಣೆ) ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳ ಪೀಠ ಸ್ಪಷ್ಟಪಡಿಸಿದೆ.ಪತ್ನಿಯು ಪತಿಯನ್ನು ಆತ್ಮಹತ್ಯೆ ಮಾಡಿಕೊಳ್ಳಲೇಬೇಕು ಎಂಬ ಉದ್ದೇಶದಿಂದ ಅಥವಾ ಸತತವಾಗಿ ಕಿರುಕುಳ ನೀಡಿ ಪ್ರಚೋದಿಸಿರುವ ಬಗ್ಗೆ ಯಾವುದೇ ಬಲವಾದ ಪುರಾವೆಗಳಿಲ್ಲದಿದ್ದಲ್ಲಿ ಆಕೆಯನ್ನು ದೋಷಿ ಎನ್ನಲಾಗದು ಎಂದು ಕೋರ್ಟ್ ಹೇಳಿದೆ.
ಪತಿಯು ತನ್ನ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್ ಬರೆದಿಟ್ಟಿದ್ದರೂ, ಕೇವಲ ಡೆತ್‌ನೋಟ್ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಸಂಸಾರದಲ್ಲಿ ದೈನಂದಿನ ಘರ್ಷಣೆಗಳು ಸಾಮಾನ್ಯ. ಅಂತಹ ಸಂದರ್ಭದಲ್ಲಿ ವ್ಯಕ್ತಿಯು ಅತಿರೇಕದ ನಿರ್ಧಾರ ಕೈಗೊಂಡರೆ ಅದಕ್ಕೆ ಪತ್ನಿ ನೇರ ಹೊಣೆಯಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
”ಯಾವುದೇ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲು ನಿರ್ದಿಷ್ಟವಾದ ಕ್ರಿಯೆ ಅಥವಾ ಸತತ ಕಿರುಕುಳ ಇರಬೇಕು. ಕೌಟುಂಬಿಕ ಕಲಹಗಳು ಪ್ರತಿಯೊಂದು ಮನೆಯಲ್ಲೂ ಇರುತ್ತವೆ. ಸಣ್ಣ ವಿಚಾರಕ್ಕೆ ಮನನೊಂದು ವ್ಯಕ್ತಿ ಪ್ರಾಣ ಕಳೆದುಕೊಂಡರೆ, ಕಾನೂನಿನ ಪ್ರಕಾರ ಪತ್ನಿಯನ್ನು ಕ್ರಿಮಿನಲ್ ಎಂದು ಕರೆಯಲು ಸಾಧ್ಯವಿಲ್ಲ,” ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.








