ನವದೆಹಲಿ:ಹೊಸ ಹಣಕಾಸು ವರ್ಷದ ಮೊದಲ ದಿನವೇ (ಏಪ್ರಿಲ್ 1, 2026) ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಯುಕೋ ಬ್ಯಾಂಕ್ (UCO Bank) ಸೇರಿದಂತೆ ಹಲವು ಬ್ಯಾಂಕುಗಳ ಯುಪಿಐ ಸೇವೆಗಳಲ್ಲಿ ತಾಂತ್ರಿಕ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಾವಿರಾರು ಗ್ರಾಹಕರು ಹಣ ವರ್ಗಾವಣೆ ಮಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ.
ಇಂದು ಮಧ್ಯಾಹ್ನದಿಂದಲೇ ಎಸ್‌ಬಿಐ ಬಳಕೆದಾರರಿಂದ 500ಕ್ಕೂ ಅಧಿಕ ಮತ್ತು ಯುಕೋ ಬ್ಯಾಂಕ್ ಬಳಕೆದಾರರಿಂದ ನೂರಾರು ದೂರುಗಳು ದಾಖಲಾಗಿವೆ ಎಂದು ‘ಡೌನ್ ಡಿಟೆಕ್ಟರ್’ (Downdetector) ವರದಿ ಮಾಡಿದೆ.ಎಸ್‌ಬಿಐ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಶೆಡ್ಯೂಲ್ಡ್ ಮೇಂಟೆನೆನ್ಸ್” (ಪೂರ್ವ ನಿರ್ಧರಿತ ನಿರ್ವಹಣಾ ಕಾರ್ಯ) ಮಧ್ಯಾಹ್ನ 12:30ರವರೆಗೆ ವಿಸ್ತರಣೆಯಾದ ಕಾರಣ ಯುಪಿಐ, ಯೋನೋ (YONO), ಐಎಂಪಿಎಸ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳಲ್ಲಿ ಅಡಚಣೆ ಉಂಟಾಗಿದೆ ಎಂದು ತಿಳಿಸಿದೆ.
ಸ್ಥಗಿತಗೊಂಡ ವಹಿವಾಟು: ಅನೇಕ ಬಳಕೆದಾರರಿಗೆ ಹಣ ಕಳುಹಿಸುವಾಗ ‘ಸರ್ವರ್ ಬ್ಯುಸಿ’ ಎಂಬ ಸಂದೇಶ ಬರುತ್ತಿದ್ದರೆ, ಇನ್ನು ಕೆಲವು ಗ್ರಾಹಕರಿಗೆ ಖಾತೆಯಿಂದ ಹಣ ಕಡಿತವಾಗಿದ್ದರೂ ಸ್ವೀಕರಿಸುವವರಿಗೆ ತಲುಪಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಪರ್ಯಾಯ ವ್ಯವಸ್ಥೆ: ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿರುವ ಸಮಯದಲ್ಲಿ ಗ್ರಾಹಕರು ಯುಪಿಐ ಲೈಟ್ (UPI Lite), ಎಟಿಎಂ ಸೇವೆಗಳು ಅಥವಾ ಇ-ರುಪಾಯಿ (eRupee) ಆಪ್ ಬಳಸುವಂತೆ ಬ್ಯಾಂಕ್‌ಗಳು ಸಲಹೆ ನೀಡಿವೆ.
ಹೋಟೆಲ್ ಬಿಲ್ ಪಾವತಿಸಲು ಮತ್ತು ಆಸ್ಪತ್ರೆಯ ತುರ್ತು ವಹಿವಾಟುಗಳಿಗೂ ಯುಪಿಐ ಕೆಲಸ ಮಾಡದ ಕಾರಣ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.








