ಬೆಂಗಳೂರು : ಇತ್ತೀಚಿಗೆ ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಯಲ್ಲಿ ತೃತೀಯ ಭಾಷೆ ಹಿಂದಿ ಭಾಷೆಗ್ ಅಂಕಗಳ ಬದಲು ಗ್ರೇಡ್ ಮಾರ್ಕ್ಸ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರಿನ ಹೆಚ್.ಎನ್.ಚಂದನಾ ಮತ್ತು ಎಸ್.ವೆಂಕಟೇಶ್ ಎಂಬವರು ಈ ಅರ್ಜಿ ಸಲ್ಲಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಹಿಂದಿ ಭಾಷೆ ಸೇರಿದಂತೆ ತೃತೀಯ ಭಾಷೆಗಳು ಕಡ್ಡಾಯವಲ್ಲ. ಈ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ಗಳನ್ನಾಗಿ ಪರಿಗಣಿಸಲಾಗುತ್ತದೆ.
ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಸೂತ್ರವನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಚಿವರು ಈ ನಿರ್ಧಾರವನ್ನು ಪ್ರಕಟಿಸುವುದಕ್ಕೂ ಮುನ್ನ ಸಾರ್ವಜನಿಕವಾಗಿ ಚರ್ಚೆ ನಡೆಸಿಲ್ಲ. ಸಚಿವ ಸಂಪುಟದ ಅನುಮೋದನೆ ಪಡೆದಿಲ್ಲ ಹಾಗೂ ಭಾಷಾ ತಜ್ಞರ ಸಲಹೆ ಇಲ್ಲದೇ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅಂದರೆ ಮಾರ್ಚ್ 31ರಂದು ಈ ರೀತಿಯ ಹೇಳಿಕೆ ಹೊರಬಿದ್ದಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಆದರೆ, ಈವರೆಗೂ ಈ ಕುರಿತಂತೆ ಯಾವುದೇ ಅಧಿಕೃತ ಸರ್ಕಾರಿ ಆದೇಶ ಅಥವಾ ಅಧಿಸೂಚನೆ ಹೊರಬಂದಿಲ್ಲ. ಸಚಿವರ ಈ ನಿರ್ಧಾರಕ್ಕಾಗಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಸಚಿವರ ಈ ನಿರ್ಧಾರ ಸಂವಿಧಾನದ ಪರಿಚ್ಛೇದ 14ರಡಿ ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆ.
ಜೊತೆಗೆ, ಪರಿಚ್ಛೇದ 21ಎ ಶಿಕ್ಷಣ ಹಕ್ಕಿನ ಮೇಲೆ ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಅಸ್ಥಿರಗೊಳಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತಾರತಮ್ಯ ಮಾಡಿದಂತಾಗಲಿದೆ. ಸರ್ಕಾರದ ಅಧಿಕೃತ ಆದೇಶವಿಲ್ಲದೆ ನೀತಿ ಜಾರಿಗೆ ತರಲು ಸಾಧ್ಯವಿಲ್ಲ ಆದ್ದರಿಂದ ಸರ್ಕಾರ ನಿರ್ಧಾರವನ್ನು ರದ್ದುಪಡಿಸಬೇಕು ಎಂದು ಪೀಠ ತಿಳಿಸಿದೆ. ಆದ್ದರಿಂದ ನ್ಯಾಯಪೀಠ ಮಧ್ಯಪ್ರವೇಶಿಸಬೇಕು. ಸಚಿವರ ನೀಡಿರುವ ವಿವಾದಾತ್ಮಕ ಹೇಳಿಕೆಗಳ ಜಾರಿಗೆ ತಡೆ ನೀಡಬೇಕು ಆಗ್ರಹಿಸಲಾಗಿದೆ.








