ಮುಂಬೈ:ಜಾಗತಿಕ ಮಟ್ಟದಲ್ಲಿ, ವಿಶೇಷವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದ ಆತಂಕ ತುಸು ತಿಳಿಯಾಗುತ್ತಿರುವ ಮುನ್ಸೂಚನೆ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ (Sensex) 1,900ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ (Nifty) 22,900ರ ಮಹತ್ವದ ಮಟ್ಟವನ್ನು ದಾಟಿ ಮುನ್ನುಗ್ಗುತ್ತಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕಡಿಮೆಯಾಗುವ ಮುನ್ಸೂಚನೆಗಳು ಲಭ್ಯವಾಗಿವೆ. ಅಮೆರಿಕ ಅಧ್ಯಕ್ಷರು ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಹೇಳಿರುವುದು ಜಾಗತಿಕ ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.ಯುದ್ಧದ ಆತಂಕ ದೂರವಾಗುತ್ತಿದ್ದಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರತೆ ಕಾಣುತ್ತಿದೆ. ಇದು ಭಾರತದಂತಹ ಆಮದು ಅವಲಂಬಿತ ದೇಶಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದರಿಂದ, ಇಂದು ಹೂಡಿಕೆದಾರರು ಮುಗಿಬಿದ್ದು ಷೇರುಗಳನ್ನು ಖರೀದಿಸುತ್ತಿದ್ದಾರೆ (Short Covering), ಇದು ಮಾರುಕಟ್ಟೆಯ ದಿಢೀರ್ ಏರಿಕೆಗೆ ಕಾರಣವಾಗಿದೆ.ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟಾಟಾ ಮೋಟಾರ್ಸ್‌ನಂತಹ ಪ್ರಮುಖ ಷೇರುಗಳು ಲಾಭದ ಹಾದಿಯಲ್ಲಿವೆ.








