ದೇಶದಲ್ಲಿ ಬೇಸಿಗೆಯ ತಾಪ ಏರುತ್ತಿರುವ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ (IMD) ಆತಂಕಕಾರಿ ಸುದ್ದಿಯೊಂದನ್ನು ನೀಡಿದೆ. ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದಾದ್ಯಂತ ವಾಡಿಕೆಗಿಂತ ಹೆಚ್ಚು ದಿನಗಳ ಕಾಲ ‘ಬಿಸಿಗಾಳಿ’ (Heatwave) ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಪೂರ್ವ, ಮಧ್ಯ ಮತ್ತು ವಾಯವ್ಯ ಭಾರತದ ಹಲವು ಭಾಗಗಳಲ್ಲಿ ಹಾಗೂ ದಕ್ಷಿಣ ಪೆನಿನ್ಸುಲಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ದಿನಗಳ ಕಾಲ ಬಿಸಿಗಾಳಿ ಬೀಸಲಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಸೇರಿದಂತೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ರಾತ್ರಿಯೂ ಸೆಕೆ ಹೆಚ್ಚು: ಈ ಬಾರಿ ಕೇವಲ ಹಗಲಷ್ಟೇ ಅಲ್ಲದೆ, ರಾತ್ರಿಯ ತಾಪಮಾನವೂ (Minimum Temperature) ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ. ಇದರಿಂದ ರಾತ್ರಿಯೂ ವಿಪರೀತ ಸೆಕೆ ಅನುಭವಕ್ಕೆ ಬರಲಿದೆ.
ಒಂದು ಕಡೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದರೆ, ಏಪ್ರಿಲ್ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ (Above-normal rainfall) ಸಾಧ್ಯತೆಯೂ ಇದೆ ಎಂದು ಐಎಂಡಿ ತಿಳಿಸಿದೆ.








