ಬೆಂಗಳೂರು : ಕಳೆದ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಮೊದಲ ಐಪಿಎಲ್ ಪಂದ್ಯ ನಡೆದಿತ್ತು. ಈ ಒಂದು ಪಂದ್ಯದಲ್ಲಿ ಬೆಂಗಳೂರು ತಂಡ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ಶುಭಾರಂಭ ಮಾಡಿತ್ತು ಆದರೆ ಇದೇ ಸಮಯ ನೋಡಿಕೊಂಡು ಕಳ್ಳರು ತಮ್ಮ ಕೈ ಚಳಕ ತೋರಿಸಿ ಸುಮಾರು 50 ಮೊಬೈಲ್ ಕಳ್ಳತನ ಮಾಡಿದ್ದರು.
ಇದೀಗ ಆರ್ಸಿಬಿ ಮತ್ತು ಎಸ್ಆರ್ಹೆಚ್ ನಡುವೆ ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಮೊಬೈಲ್ ಫೋನ್ಗಳನ್ನ ಕದ್ದಿದ್ದ ನಾಲ್ವರು ಆರೋಪಿಗಳನ್ನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು ಅಪ್ರಾಪ್ತರ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂದ್ಯದ ಸಂದರ್ಭದಲ್ಲಿ ಮೈದಾನ ಪ್ರವೇಶಿಸುವ ಗಡಿಬಿಡಿ ಹಾಗೂ ಪಂದ್ಯ ಮುಗಿದ ನಂತರ ಜನಸಂದಣಿ ಉಂಟಾಗುವ ಸಂದರ್ಭವನ್ನ ಬಳಸಿಕೊಳ್ಳುತ್ತಿದ್ದ ಆರೋಪಿಗಳು, ಮೊಬೈಲ್ ಫೋನ್ಗಳನ್ನ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ ವಿವಿಧ ಕಂಪನಿಗಳಿಗೆ ಸೇರಿದ ಒಟ್ಟು 21 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.








