ನವದೆಹಲಿ: ಹೊಸ ಹಣಕಾಸು ವರ್ಷದ ಆರಂಭದೊಂದಿಗೆ (ಏಪ್ರಿಲ್ 1, 2026) ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಬದಲಾವಣೆಗಳು ಎದುರಾಗಲಿವೆ. ಆದಾಯ ತೆರಿಗೆ ಇಲಾಖೆಯು ಇನ್ಮುಂದೆ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣಿಡಲಿದ್ದು, ನಿಮ್ಮ ಪ್ರತಿಯೊಂದು ದೊಡ್ಡ ಮೊತ್ತದ ಪಾವತಿಯೂ ತೆರಿಗೆ ಇಲಾಖೆಯ ರಾಡಾರ್‌ನಲ್ಲಿರಲಿದೆ.
ದೇಶದಲ್ಲಿ ಸದ್ಯ 11 ಕೋಟಿಗೂ ಹೆಚ್ಚು ಕ್ರೆಡಿಟ್ ಕಾರ್ಡ್ ಬಳಕೆದಾರರಿದ್ದು, ಪ್ರತಿ ತಿಂಗಳು ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಾರಿಗೆ ಬರುತ್ತಿರುವ ಹೊಸ ನಿಯಮಗಳು ಪ್ರತಿಯೊಬ್ಬ ಕಾರ್ಡ್ ದಾರನ ಮೇಲೆ ಪ್ರಭಾವ ಬೀರಲಿವೆ.
ಪ್ರಮುಖ ಬದಲಾವಣೆಗಳು ಇಲ್ಲಿವೆ:
1. 10 ಲಕ್ಷ ರೂ. ಮೀರಿದ ವಹಿವಾಟಿನ ಮೇಲೆ ನಿಗಾ
ಹೊಸ ನಿಯಮದ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ನೀವು 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಿದರೆ, ಬ್ಯಾಂಕುಗಳು ಈ ಮಾಹಿತಿಯನ್ನು ನೇರವಾಗಿ ತೆರಿಗೆ ಇಲಾಖೆಗೆ ನೀಡಲಿವೆ. ವಿದೇಶಿ ಪ್ರವಾಸದ ದೊಡ್ಡ ಖರ್ಚುಗಳು ಮತ್ತು 1 ಲಕ್ಷ ರೂಪಾಯಿಗೂ ಅಧಿಕ ನಗದು (Cash) ವಹಿವಾಟಿನ ಮೇಲೆಯೂ ವಿಶೇಷ ನಿಗಾ ಇರಿಸಲಾಗುವುದು. ನಿಮ್ಮ ಖರ್ಚು ನಿಮ್ಮ ಆದಾಯಕ್ಕಿಂತ ಹೆಚ್ಚಿದ್ದರೆ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.
2. ಪ್ಯಾನ್ ಕಾರ್ಡ್ (PAN Card) ಲಿಂಕ್ ಮಾಡುವುದು ಕಡ್ಡಾಯ
ಏಪ್ರಿಲ್ 1, 2026ರ ನಂತರ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹೊಸ ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದಿಲ್ಲ.
ಹಳೆಯ ಕಾರ್ಡ್‌ದಾರರು ಕೂಡ ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಕಡ್ಡಾಯವಾಗಿ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಬೇಕಾಗುತ್ತದೆ.
ಇದರಿಂದ ನಿಮ್ಮ ಎಲ್ಲಾ ಹಣಕಾಸಿನ ಚಟುವಟಿಕೆಗಳು ನೇರವಾಗಿ ನಿಮ್ಮ ಟ್ಯಾಕ್ಸ್ ರೆಕಾರ್ಡ್‌ಗೆ ಲಗತ್ತಾಗಲಿವೆ.
ವಿಶೇಷವೆಂದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ 3 ತಿಂಗಳಿಗಿಂತ ಹಳೆಯದಾಗಿರದಿದ್ದರೆ, ಅದನ್ನು ಪ್ಯಾನ್ ಕಾರ್ಡ್ ಮಾಡಿಸಲು ವಿಳಾಸದ ಪುರಾವೆಯಾಗಿ (Address Proof) ಬಳಸಬಹುದು.
3. ಕ್ರೆಡಿಟ್ ಕಾರ್ಡ್ ಮೂಲಕವೇ ತೆರಿಗೆ ಪಾವತಿ
ಇನ್ಮುಂದೆ ತೆರಿಗೆದಾರರು ತಮ್ಮ ಆದಾಯ ತೆರಿಗೆಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಲು ಅವಕಾಶವಿದೆ. ಆದರೆ, ಇದಕ್ಕೆ ಬ್ಯಾಂಕುಗಳು ಪ್ರೊಸೆಸಿಂಗ್ ಶುಲ್ಕ ವಿಧಿಸಬಹುದು ಮತ್ತು ಸಕಾಲದಲ್ಲಿ ಹಣ ಪಾವತಿಸದಿದ್ದರೆ ಬಡ್ಡಿ ಅನ್ವಯವಾಗುತ್ತದೆ.
4. ಕಂಪನಿ ಕ್ರೆಡಿಟ್ ಕಾರ್ಡ್ ಬಳಕೆಗೆ ಕಟ್ಟುನಿಟ್ಟಿನ ನಿಯಮ
ಒಂದು ವೇಳೆ ನೀವು ಕಂಪನಿ ನೀಡಿದ ಕಾರ್ಡ್ ಬಳಸುತ್ತಿದ್ದರೆ, ಅದರಲ್ಲಿ ಮಾಡುವ ವೈಯಕ್ತಿಕ ಖರ್ಚುಗಳನ್ನು ‘ತೆರಿಗೆಗೆ ಒಳಪಡುವ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಅಧಿಕೃತ ಕೆಲಸದ ಖರ್ಚುಗಳಿಗೆ ತೆರಿಗೆ ವಿನಾಯಿತಿ ಸಿಗಲಿದ್ದರೂ, ಅದಕ್ಕೆ ಪೂರಕವಾದ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ಇನ್ಮುಂದೆ ಕಡ್ಡಾಯ.
ಏನಿದರ ಉದ್ದೇಶ?
ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ತೆರಿಗೆ ಚೋರಿಯನ್ನು ತಡೆಯುವುದು ಈ ಬದಲಾವಣೆಗಳ ಮುಖ್ಯ ಉದ್ದೇಶವಾಗಿದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ಆದಾಯ ಮುಚ್ಚಿಟ್ಟು ಹೆಚ್ಚಿನ ಖರ್ಚು ಮಾಡುವವರಿಗೆ ಇಲಾಖೆಯ ಬಿಸಿ ತಟ್ಟಲಿದೆ.








