ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇನ್ಫ್ಲುಯೆನ್ಸರ್ಗಳು ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಗಳನ್ನು ಇನ್ಮುಂದೆ ‘ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್’ (Digital News Publishers) ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ. ಈ ಹೊಸ ಐಟಿ ನಿಯಮಗಳ ಅಡಿಯಲ್ಲಿ, ನಿಯಮ ಉಲ್ಲಂಘಿಸುವ ಪೋಸ್ಟ್ ಅಥವಾ ವಿಡಿಯೋಗಳನ್ನು ತೆಗೆದುಹಾಕಲು ಸರ್ಕಾರ ನೇರವಾಗಿ ‘ಟೇಕ್ಡೌನ್’ ನೋಟಿಸ್ ನೀಡಬಹುದಾಗಿದೆ.
ಇನ್ಮುಂದೆ ದೊಡ್ಡ ಮಟ್ಟದ ಪ್ರಭಾವ ಹೊಂದಿರುವ ಇನ್ಫ್ಲುಯೆನ್ಸರ್ಗಳನ್ನು ಕೇವಲ ಬಳಕೆದಾರರಲ್ಲದೆ, ‘ಸುದ್ದಿ ಪ್ರಕಾಶಕರು’ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಅವರು ಮಾಧ್ಯಮ ಸಂಸ್ಥೆಗಳಿಗೆ ಅನ್ವಯವಾಗುವ ಕಠಿಣ ನೀತಿ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಯಾವುದೇ ಪೋಸ್ಟ್ ದೇಶದ ಭದ್ರತೆ, ಸಾರ್ವಜನಿಕ ಶಾಂತಿ ಅಥವಾ ಸುಳ್ಳು ಮಾಹಿತಿಯಿಂದ ಕೂಡಿದ್ದರೆ, ಆ ಕಂಟೆಂಟ್ ಅನ್ನು ತಕ್ಷಣವೇ ಡಿಲೀಟ್ ಮಾಡಲು ಸರ್ಕಾರ ಆದೇಶಿಸಬಹುದು. ಸೂಚನೆ ಪಾಲಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಇನ್ಫ್ಲುಯೆನ್ಸರ್ಗಳು ತಾವು ಹಂಚಿಕೊಳ್ಳುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಕಡ್ಡಾಯವಾಗಲಿದೆ. ವಿಶೇಷವಾಗಿ ಹಣಕಾಸು (Finfluencers) ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ತಪ್ಪು ಮಾಹಿತಿ ನೀಡುವವರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು.
ದೂರು ಪರಿಹಾರ ವ್ಯವಸ್ಥೆ: ಪ್ರತಿಯೊಬ್ಬ ದೊಡ್ಡ ಇನ್ಫ್ಲುಯೆನ್ಸರ್ ಕೂಡ ತಮ್ಮ ಕಂಟೆಂಟ್ ಬಗ್ಗೆ ಬರುವ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲು ಮತ್ತು ಅವುಗಳನ್ನು ನಿಗದಿತ ಸಮಯದಲ್ಲಿ ಬಗೆಹರಿಸಲು ಒಬ್ಬ ಅಧಿಕಾರಿಯನ್ನು ನೇಮಿಸಿಕೊಳ್ಳಬೇಕಾಗಬಹುದು.








