ನವದೆಹಲಿ: ಸುಸ್ತಿದಾರರಿಂದ ಸಾಲ ವಸೂಲಿ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಕಾಲಮಿತಿಯೊಳಗೆ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶ ಹೊಂದಿರುವ ‘ದಿವಾಳಿತನ ಮತ್ತು ದಿವಾಳಿ ಸಂಹಿತೆ (ತಿದ್ದುಪಡಿ) ಮಸೂದೆ 2025’ ಕ್ಕೆ ಲೋಕಸಭೆಯು ಇಂದು ಹಸಿರು ನಿಶಾನೆ ತೋರಿಸಿದೆ.
ಉದ್ದಿಮೆಗಳು ದಿವಾಳಿಯಾದ ಸಂದರ್ಭದಲ್ಲಿ ಅವುಗಳ ಆಸ್ತಿ ಹರಾಜು ಮತ್ತು ಸಾಲಗಾರರಿಗೆ ಹಣ ಮರಳಿಸುವ ಪ್ರಕ್ರಿಯೆಯನ್ನು ಈ ತಿದ್ದುಪಡಿ ಮಸೂದೆಯು ಮತ್ತಷ್ಟು ಚುರುಕುಗೊಳಿಸಲಿದೆ.ನ್ಯಾಯಾಧಿಕರಣಗಳಲ್ಲಿ (NCLT) ಪ್ರಕರಣಗಳ ವಿಲೇವಾರಿಗೆ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎಂಎಸ್‌ಎಂಇ (MSME) ವಲಯದ ಕಂಪನಿಗಳು ದಿವಾಳಿಯಾದಾಗ ಅನುಸರಿಸಬೇಕಾದ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಲಾಗಿದ್ದು, ಉದ್ಯಮಿಗಳಿಗೆ ಮರುಜೀವ ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಅನುತ್ಪಾದಕ ಆಸ್ತಿ (NPA) ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಹೂಡಿಕೆದಾರರಲ್ಲಿ ನಂಬಿಕೆ ಮೂಡಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ.








