ತೆಹ್ರಾನ್: ವಿಶ್ವದ ಅತ್ಯಂತ ಆಯಕಟ್ಟಿನ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಸಂಚರಿಸುವ ಹಡಗುಗಳ ಮೇಲೆ ಸುಂಕ ವಿಧಿಸುವ ವಿವಾದಾತ್ಮಕ ಯೋಜನೆಗೆ ಇರಾನ್ ಸಂಸತ್ತಿನ ಭದ್ರತಾ ಸಮಿತಿಯು ಅಧಿಕೃತವಾಗಿ ಅನುಮೋದನೆ ನೀಡಿದೆ. ಇತ್ತೀಚಿನ ಪ್ರಾದೇಶಿಕ ಉದ್ವಿಗ್ನತೆ ಮತ್ತು ಆರ್ಥಿಕ ಸವಾಲುಗಳ ಹಿನ್ನೆಲೆಯಲ್ಲಿ ಇರಾನ್ ಈ ನಿರ್ಧಾರ ಕೈಗೊಂಡಿದೆ.
ಜಲಸಂಧಿಯ ಭದ್ರತೆ, ಹಡಗುಗಳ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಈ ಸುಂಕವನ್ನು ವಿಧಿಸಲು ಉದ್ದೇಶಿಸಲಾಗಿದೆ. ಇರಾನ್ನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಈ ಯೋಜನೆಯ ಪ್ರಮುಖ ಗುರಿ ಎಂದು ಸಮಿತಿ ತಿಳಿಸಿದೆ.
ಯೋಜನೆಯ ಅಡಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಸೇರಿದ ಹಡಗುಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಸ್ತಾಪವಿದೆ. ಅಲ್ಲದೆ, ಇರಾನ್ ಮೇಲೆ ಏಕಪಕ್ಷೀಯವಾಗಿ ನಿರ್ಬಂಧ ಹೇರಿರುವ ದೇಶಗಳ ಹಡಗುಗಳಿಗೂ ಸಂಚಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.ಈ ಸುಂಕವನ್ನು ಇರಾನ್ನ ಕರೆನ್ಸಿಯಾದ ‘ರಿಯಾಲ್’ ಮೂಲಕವೇ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ.
ವಿಶ್ವದ ಒಟ್ಟು ತೈಲ ಸರಬರಾಜಿನ ಸುಮಾರು ಶೇ. 20ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ನ ಈ ನಡೆಯಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆಯಾಗುವ ಮತ್ತು ಅಂತರಾಷ್ಟ್ರೀಯ ಹಡಗು ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.








