ನವದೆಹಲಿ: ದೇಶದ ಆಂತರಿಕ ಭದ್ರತೆ ಮತ್ತು ದತ್ತಾಂಶ ಸಂರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಚೀನಾ ಮೂಲದ ಸಿಸಿಟಿವಿ ಕ್ಯಾಮೆರಾಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲು ಸಜ್ಜಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ, ಅಗತ್ಯ ಭದ್ರತಾ ಪ್ರಮಾಣೀಕರಣವಿಲ್ಲದ (Security Certification) ಸಿಸಿಟಿವಿ ಕ್ಯಾಮೆರಾಗಳ ಮಾರಾಟ ಮತ್ತು ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗುವುದು.
ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹೊರಡಿಸಿರುವ ಹೊಸ ಆದೇಶದಂತೆ, ಇನ್ನು ಮುಂದೆ ಸಿಸಿಟಿವಿ ಕ್ಯಾಮೆರಾಗಳು ಸರ್ಕಾರ ಅನುಮೋದಿಸಿದ ಲ್ಯಾಬ್‌ಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಪರೀಕ್ಷೆಗೆ ಒಳಪಡಬೇಕು.
ಹೈಕ್ ವಿಷನ್ (Hikvision), ದಹುವಾ (Dahua) ಮತ್ತು ಟಿಪಿ-ಲಿಂಕ್ (TP-Link) ನಂತಹ ಪ್ರಮುಖ ಚೀನಾ ಕಂಪನಿಗಳಿಗೆ ಈ ನಿಯಮವು ದೊಡ್ಡ ಹೊಡೆತ ನೀಡಲಿದೆ. ಅವುಗಳ ಉತ್ಪನ್ನಗಳಲ್ಲಿ ‘ಡಾಟಾ ಲೀಕ್’ ಅಥವಾ ಗೂಢಚರ್ಯೆಯ ಅಪಾಯವಿರುವ ಕಾರಣ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.
ಕ್ಯಾಮೆರಾಗಳಲ್ಲಿ ಬಳಸಲಾಗುವ ಚಿಪ್‌ಸೆಟ್ (SoC) ಮತ್ತು ಇತರ ಪ್ರಮುಖ ಭಾಗಗಳು ಯಾವ ದೇಶದಿಂದ ಬಂದಿವೆ ಎಂಬುದನ್ನು ಕಂಪನಿಗಳು ಕಡ್ಡಾಯವಾಗಿ ಘೋಷಿಸಬೇಕು.







