ಚಿಕ್ಕಮಗಳೂರು : ರಾಜ್ಯದಲ್ಲಿ ಇತ್ತೀಚಿಗೆ ಸೈಬರ್ ವಂಚನೆ ಕೇಸ್ ಗಳು ಹೆಚ್ಚಿದ್ದು, ಇದೀಗ ಟ್ರೇಡಿಂಗ್ನಲ್ಲಿ ಹೆಚ್ಚು ಹಣ ಗಳಿಸುವ ಆಸೆ ಹುಟ್ಟಿಸಿ ಚಿಕ್ಕಮಗಳೂರಿನ ವ್ಯಕ್ತಿಗೆ ಕೋಟಿಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಗೆ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.
ಟ್ರೇಡಿಂಗ್ ಮೂಲಕ ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಬಗ್ಗೆ ವಂಚಕರು ಭರವಸೆ ನೀಡಿದ್ದರು. ಇದನ್ನು ನಂಬಿದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವ್ಯಕ್ತಿ ಹಣ ಹೂಡಿಕೆ ಮಾಡಿ ಬರೋಬ್ಬರಿ 1.28 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಕಡೂರು ತಾಲೂಕಿನ ನಿವಾಸಿ ಕಲ್ಲೇಗೌಡ ವಂಚನೆಗೊಳಗಾದವರು. ಫೇಸ್‌ಬುಕ್‌ನಲ್ಲಿ ಕಂಡುಬಂದ ‘FYERS’ ಎಂಬ ಟ್ರೇಡಿಂಗ್ ಲಿಂಕ್ ಅನ್ನು ಇವರು ಕ್ಲಿಕ್ ಮಾಡಿದ್ದರು. ಈ ಮೂಲಕ ಇವರು ‘F8-FYERS ಸೆಕ್ಯೂರಿಟಿ ಗ್ರೂಪ್’ ಎಂಬ ವಾಟ್ಸಾಪ್ ಗುಂಪಿಗೆ ಸೇರ್ಪಡೆಯಾಗಿದ್ದರು.
ಬಳಿಕ ವಂಚಕರು ನೀಡಿದ ‘QIB-iPO’ ಟ್ರೇಡಿಂಗ್ ಲಿಂಕ್‌ನಲ್ಲಿ ಖಾತೆ ತೆರೆದಿದ್ದರು. ಆರಂಭದಲ್ಲಿ ಕಲ್ಲೇಗೌಡ ಅವರು 60 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ವಂಚಕರು ಲಾಭದ ಹಣ ಎಂದು ಬಿಂಬಿಸಿ 17,800 ರೂಪಾಯಿಗಳನ್ನು ಇವರ ಖಾತೆಗೆ ಜಮಾ ಮಾಡುವ ಮೂಲಕ ನಂಬಿಕೆ ಹುಟ್ಟಿಸಿದ್ದರು.
ಆದರೆ, ಹೂಡಿಕೆ ಮಾಡಿದ ಹಣ ಮತ್ತು ಬಂದ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಹಲವು ಪ್ರಯತ್ನಗಳ ನಂತರವೂ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ವಂಚಕರಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಬಾರದಿದ್ದಾಗ ತಾನು ಮೋಸ ಹೋಗಿರುವುದು ಕಲ್ಲೇಗೌಡ ಅವರಿಗೆ ಗೊತ್ತಾಗಿದೆ. ಕೂಡಲೇ ಅವರು ಚಿಕ್ಕಮಗಳೂರು ಸೆನ್ (CEN) ಪೊಲೀಸ್ ಠಾಣೆಯ ಮೆಟ್ಟಿಲೇರಿ, ಪ್ರಕರಣ ದಾಖಲಿಸಿದ್ದಾರೆ.








