ಬೆಂಗಳೂರು : ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಹೈದ್ರಾಬಾದ್ ನಡುವೆ ಬೆಂಗಳೂರು ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದೆ. ಇನ್ನು ಪಂದ್ಯದ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಕ್ಕೆ ನಾಗರಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಸಾಮಾನ್ಯ ದಿನಗಳಿಗಿಂತ ದ್ವಿಗುಣ ಪ್ರಮಾಣದಲ್ಲಿ ಪ್ರಯಾಣಿಕರು ಮೆಟ್ರೋ ಬಳಸಿದ್ದಾರೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಪಂದ್ಯ ಮುಗಿದ ಕೇವಲ 50 ನಿಮಿಷಗಳ ಅವಧಿಯಲ್ಲಿ ಸುಮಾರು 22,000 ಜನರು ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ನಿಲ್ದಾಣಗಳಿಂದ ಸುರಕ್ಷಿತವಾಗಿ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ಬಿಎಂಆರ್ಸಿಎಲ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿತ್ತು. ಮೆಜೆಸ್ಟಿಕ್ ಕಡೆಗೆ 13 ಹಾಗೂ ವೈಟ್ಫೀಲ್ಡ್ ಕಡೆಗೆ 9 ರೈಲುಗಳು ಸೇರಿದಂತೆ ಒಟ್ಟು 39 ರೌಂಡ್ ಟ್ರಿಪ್ಗಳನ್ನು ಕಾರ್ಯಾಚರಣೆ ಮಾಡಲಾಗಿದೆ.
ಪರ್ಪಲ್ ಲೈನ್ನಲ್ಲಿ 18, ಗ್ರೀನ್ ಲೈನ್ನಲ್ಲಿ 15 ಮತ್ತು ಯಲ್ಲೋ ಲೈನ್ನಲ್ಲಿ 6 ಹೆಚ್ಚುವರಿ ಸಂಚಾರಗಳನ್ನು ನಡೆಸುವ ಮೂಲಕ ಪ್ರಯಾಣಿಕರ ದಟ್ಟಣೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಪ್ರತಿ ಮೂರು ನಿಮಿಷಕ್ಕೊಮ್ಮೆ ರೈಲು ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳಿಗೂ ಇನ್ನಷ್ಟು ಸೌಲಭ್ಯಗಳನ್ನು ಹೆಚ್ಚಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ.








