ವ್ಯಾಟಿಕನ್ ಸಿಟಿ: ವಿಶ್ವಾದ್ಯಂತ ಕ್ರಿಶ್ಚಿಯನ್ ಸಮುದಾಯದ ಪವಿತ್ರ ‘ಪಾಮ್ ಸಂಡೇ’ ಆಚರಣೆಯ ಸಂದರ್ಭದಲ್ಲಿ ಪೋಪ್ ಲಿಯೋ XIV ಅವರು ಶಾಂತಿ ಮತ್ತು ಅಹಿಂಸೆಯ ಕುರಿತು ಅತ್ಯಂತ ಪ್ರಬಲ ಸಂದೇಶವನ್ನು ನೀಡಿದ್ದಾರೆ. ಇತ್ತೀಚಿನ ಜಾಗತಿಕ ಸಂಘರ್ಷಗಳು ಮತ್ತು ಯುದ್ಧಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಯಾರು ಯುದ್ಧವನ್ನು ಸಾರುತ್ತಾರೋ ಮತ್ತು ಹಿಂಸೆಯಲ್ಲಿ ತೊಡಗುತ್ತಾರೋ ಅಂತಹವರ ಪ್ರಾರ್ಥನೆಯನ್ನು ದೇವರು ಎಂದಿಗೂ ಆಲಿಸುವುದಿಲ್ಲ” ಎಂದು ಕಟುವಾಗಿ ಹೇಳಿದ್ದಾರೆ.
ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ನೆರೆದಿದ್ದ ಸಹಸ್ರಾರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಪೋಪ್, “ದೇವರು ಪ್ರೀತಿಯ ರೂಪವಾಗಿದ್ದಾನೆ. ಯಾರ ಕೈಗಳು ಅಮಾಯಕರ ರಕ್ತದಿಂದ ಮಲಿನವಾಗಿದೆಯೋ, ಅವರು ಮಾಡುವ ಪ್ರಾರ್ಥನೆಯನ್ನು ದೇವರು ತಿರಸ್ಕರಿಸುತ್ತಾನೆ” ಎಂದು ತಿಳಿಸಿದರು.
ಇಸ್ರೇಲ್-ಇರಾನ್ ಮತ್ತು ರಷ್ಯಾ-ಉಕ್ರೇನ್ ಯುದ್ಧಗಳ ತೀವ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಯಾವುದೇ ಕಾರಣಕ್ಕೂ ಧರ್ಮ ಅಥವಾ ದೇವರ ಹೆಸರಿನಲ್ಲಿ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
“ಯೇಸುಕ್ರಿಸ್ತನು ಶಾಂತಿಯ ರಾಜನಾಗಿ ಜಗತ್ತಿಗೆ ಬಂದವನು. ಆತನು ಎಂದಿಗೂ ಆಯುಧ ಹಿಡಿದವನಲ್ಲ. ನಾವು ಅವರ ಹಾದಿಯಲ್ಲಿ ನಡೆಯಬೇಕಾದರೆ ಮೊದಲು ಯುದ್ಧವನ್ನು ಬಿಡಬೇಕು” ಎಂದು ಕರೆ ನೀಡಿದರು.ಯುದ್ಧದಿಂದಾಗಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಮಕ್ಕಳು, ಮಹಿಳೆಯರು ಮತ್ತು ನಿರಾಶ್ರಿತರ ನೋವಿಗೆ ವಿಶ್ವ ಸಮುದಾಯ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದರು.








