ಬೆಂಗಳೂರು: ರಾಜ್ಯಾದ್ಯಂತ ಮಂಗಳವಾರ ನಡೆದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆಯಲ್ಲಿನ ಮುದ್ರಣ ದೋಷದಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಶ್ನೆಗಳ ಮೇಲೆಯೇ ಡಿಜಿಟಲ್ ಕೋಡ್ ಸಂಖ್ಯೆಗಳು ಮುದ್ರಣವಾಗಿರುವುದು ಪರೀಕ್ಷಾರ್ಥಿಗಳಲ್ಲಿ ತೀವ್ರ ಗೊಂದಲ ಮೂಡಿಸಿದೆ.
ಪರೀಕ್ಷಾ ಅಕ್ರಮ ತಡೆಯುವ ಉದ್ದೇಶದಿಂದ ಪ್ರತಿ ಪ್ರಶ್ನೆ ಪತ್ರಿಕೆಗೆ ನೀಡಲಾಗುವ ‘ಡಿಜಿಟಲ್ ಕೋಡ್’ ಸಂಖ್ಯೆಗಳನ್ನು ಈ ಬಾರಿ ವಾಟರ್ ಮಾರ್ಕ್ ರೂಪದಲ್ಲಿ ಮುದ್ರಿಸಲಾಗಿತ್ತು. ಆದರೆ, ಇವು ಗಣಿತದ ಸೂತ್ರಗಳು ಮತ್ತು ಅಂಕಿ-ಅಂಶಗಳ ಮೇಲೆಯೇ ಮೂಡಿಬಂದಿರುವುದರಿಂದ ಪ್ರಶ್ನೆಗಳನ್ನು ಸರಿಯಾಗಿ ಓದಲು ಸಾಧ್ಯವಾಗಿಲ್ಲ.
ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬಂದಿದ್ದು, ಪ್ರಶ್ನೆಗಳು ಸ್ಪಷ್ಟವಾಗಿ ಕಾಣಿಸದ ಕಾರಣ ವಿದ್ಯಾರ್ಥಿಗಳು ಕೆಲವು ಪ್ರಶ್ನೆಗಳನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾರೆ.
ಪ್ರಮುಖ ಅಂಕಿಗಳ ಮೇಲೆಯೇ ಕೋಡ್ ನಂಬರ್ ಅಚ್ಚಾಗಿರುವುದರಿಂದ ಲೆಕ್ಕಾಚಾರ ತಪ್ಪುವ ಸಾಧ್ಯತೆಯಿದೆ. ಇದು ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಭೀತಿ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ವ್ಯಕ್ತವಾಗಿದೆ.








