ಬೆಂಗಳೂರು: ರಾಜ್ಯದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ಸರ್ಕಾರ ಘೋಷಿಸಿರುವ 60 ದಿನಗಳ ವಯೋಮಿತಿ ಸಡಿಲಿಕೆಯು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಯಮದಿಂದ ಕೇವಲ 1 ಲಕ್ಷ ಮಕ್ಕಳಿಗೆ ಮಾತ್ರ ಪ್ರಯೋಜನವಾಗಲಿದ್ದು, ಉಳಿದ 4 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ವಯೋಮಿತಿಯನ್ನು ಕನಿಷ್ಠ 5.5 ವರ್ಷಕ್ಕೆ ಇಳಿಸಬೇಕೆಂದು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ.
ಕೇವಲ 60 ದಿನಗಳ ಸಡಿಲಿಕೆ ನೀಡಿರುವುದು “ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ” ಹಚ್ಚಿದಂತಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.ವಯೋಮಿತಿಯ ಅಲ್ಪ ವ್ಯತ್ಯಾಸದಿಂದಾಗಿ ಲಕ್ಷಾಂತರ ಮಕ್ಕಳು ಒಂದು ಇಡೀ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.ದಶಕಗಳಿಂದ ನಡೆದುಬಂದಿದ್ದ ನಿಯಮಗಳನ್ನು ಅನಗತ್ಯವಾಗಿ ಬದಲಾವಣೆ ಮಾಡಿ ಪೋಷಕರಲ್ಲಿ ಮತ್ತು ಮಕ್ಕಳಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬುದು ಹೋರಾಟಗಾರರ ಆರೋಪ.
ಹೋರಾಟದ ಮುಂದಿನ ಹಾದಿ:
ಸರ್ಕಾರದ ಮೇಲೆ ಒತ್ತಡ ಹೇರಲು ಪೋಷಕರು ಈಗ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಮೂಲಕ ಅಭಿಯಾನ ಆರಂಭಿಸಲಾಗಿದ್ದು, ಈ ಕೆಳಗಿನ ಕ್ರಮಗಳಿಗೆ ನಿರ್ಧರಿಸಲಾಗಿದೆ:ರಾಜ್ಯಾದ್ಯಂತ ಇರುವ ಅರ್ಹ ಪೋಷಕರನ್ನು ಒಗ್ಗೂಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದು.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು.ವಾಟ್ಸಾಪ್ ಮತ್ತು ಇತರ ವೇದಿಕೆಗಳಲ್ಲಿ ವಯೋಮಿತಿ ತಾರತಮ್ಯದ ಕುರಿತು ಪೋಸ್ಟರ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯುವುದು.
ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.








