ಬೆಂಗಳೂರು : ವೈವಾಹಿಕ ಜೀವನದಲ್ಲಿ ನಡೆಯುವ ಸಾಮಾನ್ಯ ಅಸಮಾಧಾನಗಳು ಅಥವಾ ಕುಟುಂಬದ ಒಳಗಿನ ಸಣ್ಣಪುಟ್ಟ ಜಗಳಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ಅಡಿಯಲ್ಲಿ ‘ವರದಕ್ಷಿಣೆ ಕಿರುಕುಳ’ ಅಥವಾ ‘ಕ್ರೌರ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಆರೋಪಪಟ್ಟಿ ರದ್ದು ಕೋರಿ ಪತಿಯ ಸಂಬಂಧಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ಮಾಡಿದೆ.
ಅವಿಭಕ್ತ ಕುಟುಂಬಗಳಲ್ಲಿ ನಡೆಯಯುವ ದಿನನಿತ್ಯದ ಜಗಳಗಳು, ಸಣ್ಣ ವಾಗ್ವಾದಗಳು ಸಾಮಾನ್ಯ. ಇದು ಅಲ್ಲದೆ, ಮದುವೆಗೂ ಮುನ್ನ ನಡೆದಿರುವ ಮದುವೆಯ ಖರ್ಚು ವೆಚ್ಚಗಳ ಕುರಿತ ಚರ್ಚೆಗಳನ್ನು ವರದಕ್ಷಿಣೆ ಕಿರುಕುಳ ಎಂದು ಹೇಳಲಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಕೌಟುಂಬಿಕೆ ದೌರ್ಜನ್ಯ ಆರೋಪವಿಲ್ಲ.ಅಲ್ಲದೆ, ಅಸ್ಪಷ್ಟ ಮತ್ತು ಆಧಾರರಹಿತ ಆರೋಪಗಳಿಂದ ಇಡೀ ಕುಟುಂಬದ ಸದಸ್ಯರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ಸಾಧನವಾಗಿ ಬಳಸಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಮದುವೆಗೆ ಆಗಿರುವ ವೆಚ್ಚವನ್ನೇ ವರದಕ್ಷಿಣೆ ಕಿರುಕುಳ ಎಂಬುದಾಗಿ ಪ್ರಕರಣ ಸಂಬಂಧದ ದೂರು ಮತ್ತು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಆದರೆ, ವರದಕ್ಷಿಣೆ ಕಿರುಕುಳವನ್ನು ಬಿಂಬಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ಬಸವೇಶ್ವರನಗರ ನಿವಾಸಿಯಾದ ದೂರುದಾರ ಮಹಿಳೆ ಮತ್ತು ಪತಿ 2018ರಲ್ಲಿ ಮದುವೆಯಾಗಿದ್ದರು. ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಿಶ್ಚಿತಾರ್ಥ ಹಾಗೂ ಮೈಸೂರಿನ ಐತಿಹಾಸಿಕ ಲಲಿತ ಮಹಲ್ನಲ್ಲಿ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ವಿವಾಹವಾದ ಕೇವಲ ಆರು ತಿಂಗಳಲ್ಲೇ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಮದುವೆಯ ಮಾತುಕತೆಯ ಸಂದರ್ಭದಲ್ಲಿ 25 ಲಕ್ಷ ರೂಪಾಯಿ ನಗದು, 300 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿಗೆ ಬೇಡಿಕೆ ಇಡಲಾಗಿತ್ತು. ಜೊತೆಗೆ ಅಮೆರಿಕಾದಲ್ಲಿ ಬಾಡಿಗೆ ಮನೆಯ ವ್ಯವಸ್ಥೆ ಮಾಡಿಕೊಡುವಂತೆ ಪತಿಯ ಕುಟುಂಬದ ಸದಸ್ಯರು ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಇದೇ ಪ್ರಕರಣವನ್ನು ವರದಕ್ಷಿಣೆ ಕಿರುಕುಳ ಎಂದು ಆರೋಪಿಸಿ, ಪತಿ ಮತ್ತು ಅವರ ಕುಟುಂಬಸ್ಥರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಪೊಲೀಸರು, ಅರ್ಜಿದಾರರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅತ್ತೆ, ಮಾವ ಮತ್ತು ನಾದಿನಿ ಹೈಕೋರ್ಟ್ ಮೆಟ್ಟಿಲೇರಿದ್ದರು.








