ಜೋರ್ಹತ್ (ಅಸ್ಸಾಂ): ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಜೋರ್ಹತ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ನಿಗೂಢ ಸ್ಫೋಟವೊಂದು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ 8 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಇತರ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಜೋರ್ಹತ್ ಪಟ್ಟಣದ ರಾಜಾ ಮೈದಮ್ ಹೊಸ ಕಾಲೋನಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಶನಿವಾರ ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಮೃತರನ್ನು ಗುಜರಿ ಸಾಮಾನು ಸಂಗ್ರಹಿಸುವ ನೂರ್ ಮೊಹಮ್ಮದ್ (45) ಮತ್ತು ಎಂಟು ವರ್ಷದ ಬಾಲಕ ಮೊಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ.ನೂರ್ ಮೊಹಮ್ಮದ್ ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ದೇಹವು ಛಿದ್ರಗೊಂಡಿದೆ.
ಗಾಯಗೊಂಡಿದ್ದ ಬಾಲಕ ಇಕ್ಬಾಲ್ ಜೋರ್ಹತ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಗಾಯಾಳುಗಳು: ಸೆಹನಾಜ್ ಬೇಗಂ (12) ಮತ್ತು ನೂರ್ಜಹಾನ್ ಬೇಗಂ (35) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








