ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕುರಿತು ರಾಜ್ಯ ಸರ್ಕಾರ ಈಗ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೆ.ಪಿ.ಎಂ.ಇ (KPME) ತಿದ್ದುಪಡಿ ಕಾಯ್ದೆ 2017ರ ಕಲಂ 18ರ ಅಡಿಯಲ್ಲಿ ಹೊರಡಿಸಲಾದ ಈ ಆದೇಶವು, ವೈದ್ಯಕೀಯ ವಲಯದಲ್ಲಿ ಪಾರದರ್ಶಕತೆ ತರುವ ಉದ್ದೇಶ ಹೊಂದಿದೆ.
ಖಾಸಗಿ ಆಸ್ಪತ್ರೆಗಳಿಗೆ ಇರುವ ನಿಯಮಗಳು:
ರಾಜ್ಯದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಈ ಕೆಳಗಿನ ಮಾಹಿತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು:
-
ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಂಪೂರ್ಣ ವಿವರಗಳನ್ನು ಜಿಲ್ಲಾ ಕೆಪಿಎಂಇ ನೋಂದಣಿ ಪ್ರಾಧಿಕಾರ ಹಾಗೂ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸಲ್ಲಿಸಬೇಕು.
-
ಈ ಮಾಹಿತಿಯನ್ನು ಆರೋಗ್ಯ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
-
ಮುಖ್ಯವಾಗಿ, ಯಾವುದೇ ಸರ್ಕಾರಿ ವೈದ್ಯರು ತಮ್ಮ ಖಾಸಗಿ ಸಂಸ್ಥೆಗಳಲ್ಲಿ ಒಳರೋಗಿಗಳಿಗೆ (In-patients) ಚಿಕಿತ್ಸೆ ನೀಡುತ್ತಿಲ್ಲ ಎಂಬುದನ್ನು ದೃಢಪಡಿಸಬೇಕು.
ಸರ್ಕಾರಿ ವೈದ್ಯರಿಗೆ ಕಡ್ಡಾಯ ಸೂಚನೆ:
ಖಾಸಗಿ ವೃತ್ತಿ ಮಾಡುತ್ತಿರುವ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ತಾವಾಗಿಯೇ ಈ ಕ್ರಮಗಳನ್ನು ಪಾಲಿಸಬೇಕು:
-
ತಾವು ಖಾಸಗಿ ವೃತ್ತಿ ಮಾಡುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ (DHO) ಹಾಗೂ ಆಯುಕ್ತರಿಗೆ ಮಾಹಿತಿ ನೀಡಬೇಕು.
-
ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಹೊರರೋಗಿಗಳಿಗೆ (OPD) ಮಾತ್ರ ಚಿಕಿತ್ಸೆ ನೀಡುತ್ತಿರುವುದಾಗಿ ಲಿಖಿತವಾಗಿ ದೃಢಪಡಿಸಬೇಕು.
60 ದಿನಗಳ ಗಡುವು:
ಈ ಆದೇಶ ಜಾರಿಯಾದ 60 ದಿನಗಳ ನಂತರ, ಆರೋಗ್ಯ ಇಲಾಖೆಯ ಜಾಲತಾಣದಲ್ಲಿ ಯಾರ ಹೆಸರು ಪ್ರಕಟವಾಗಿದೆಯೋ ಅಂತಹ ಸರ್ಕಾರಿ ವೈದ್ಯರು ಮಾತ್ರ ತಾವು ಘೋಷಿಸಿದ ಮಾಹಿತಿಯಂತೆ ಖಾಸಗಿ ವೃತ್ತಿ ಮುಂದುವರಿಸಲು ಅವಕಾಶವಿರುತ್ತದೆ. ಜಾಲತಾಣದಲ್ಲಿ ಮಾಹಿತಿ ಇಲ್ಲದ ಅಥವಾ ನೋಂದಣಿ ಮಾಡಿಸದ ಯಾವುದೇ ವೈದ್ಯರು ಖಾಸಗಿ ಪ್ರಾಕ್ಟೀಸ್ ಮಾಡುವಂತಿಲ್ಲ.
ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು?
ಈ ಆದೇಶವನ್ನು ಗಾಳಿಗೆ ತೂರುವ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು:
-
ಕೆಪಿಎಂಇ ಕಾಯ್ದೆ 2017ರ ಪ್ರಕಾರ ದಂಡ ಅಥವಾ ಕಾನೂನು ಕ್ರಮ ಜರುಗಿಸಲಾಗುವುದು.
-
ಸರ್ಕಾರಿ ವೈದ್ಯರ ವಿರುದ್ಧ ‘ಕರ್ನಾಟಕ ನಾಗರಿಕ ಸೇವಾ ನಿಯಮ’ (KCS Rules) ಗಳ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಿ, ಸೇವೆಯಿಂದ ಅಮಾನತು ಮಾಡುವ ಸಾಧ್ಯತೆಯೂ ಇರುತ್ತದೆ.
ಈ ಆದೇಶದ ಅನುಪಾಲನೆಯನ್ನು ನೋಡಿಕೊಳ್ಳುವ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ (DHO) ವಹಿಸಲಾಗಿದೆ.









