ನ್ಯೂಯಾರ್ಕ್: ಪಶ್ಚಿಮ ಏಷ್ಯಾದಲ್ಲಿ (ಇರಾನ್-ಇಸ್ರೇಲ್) ಯುದ್ಧ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಮತ್ತು ಆಹಾರ ಪೂರೈಕೆಯ ಪ್ರಮುಖ ಕೊಂಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯಲ್ಲಿ ವ್ಯಾಪಾರ ನೌಕೆಗಳ ಸುರಕ್ಷತೆಗಾಗಿ ವಿಶ್ವಸಂಸ್ಥೆ (UN) ವಿಶೇಷ ಕಾರ್ಯಪಡೆಯನ್ನು (Task Force) ರಚಿಸಿದೆ. ಸಮುದ್ರ ಮಾರ್ಗದ ಮೂಲಕ ನಡೆಯುವ ಮಾನವೀಯ ನೆರವು ಮತ್ತು ರಸಗೊಬ್ಬರ ವ್ಯಾಪಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಈ ಪಡೆಯ ಮುಖ್ಯ ಉದ್ದೇಶವಾಗಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಈ ಕಾರ್ಯಪಡೆಯನ್ನು ಘೋಷಿಸಿದ್ದು, ಇದನ್ನು ‘ಯುಎನ್ ಆಫೀಸ್ ಫಾರ್ ಪ್ರಾಜೆಕ್ಟ್ ಸರ್ವಿಸಸ್’ (UNOPS) ಮುಖ್ಯಸ್ಥರಾದ ಜಾರ್ಜ್ ಮೊರೇರಾ ಡಾ ಸಿಲ್ವಾ ಅವರು ಮುನ್ನಡೆಸಲಿದ್ದಾರೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಒಟ್ಟು ಇಂಧನ ಬಳಕೆಯ ಶೇ. 20ರಷ್ಟು ಪಾಲನ್ನು ಹೊತ್ತೊಯ್ಯುವ ಮಾರ್ಗವಾಗಿದೆ. ಯುದ್ಧದ ಕಾರಣದಿಂದಾಗಿ ಈ ಮಾರ್ಗದಲ್ಲಿ ನೌಕೆಗಳ ಸಂಚಾರ ಕಡಿತಗೊಂಡಿದ್ದು, ಇದು ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡುವ ಆತಂಕ ಮೂಡಿಸಿದೆ.
ಈ ಟಾಸ್ಕ್ ಫೋರ್ಸ್ ಪ್ರಮುಖವಾಗಿ ಆಹಾರ, ರಸಗೊಬ್ಬರ ಮತ್ತು ಔಷಧಗಳಂತಹ ಅಗತ್ಯ ವಸ್ತುಗಳ ಸಾಗಣೆಗೆ ಸುರಕ್ಷಿತ ಮಾರ್ಗವನ್ನು (Humanitarian Corridor) ಕಲ್ಪಿಸಲು ತಾಂತ್ರಿಕ ಕಾರ್ಯವಿಧಾನಗಳನ್ನು ರೂಪಿಸಲಿದೆ. ವರದಿಗಳ ಪ್ರಕಾರ, ಇರಾನ್ ಕೂಡ ತನ್ನ ಮೇಲೆ ಯುದ್ಧ ನಡೆಯುತ್ತಿದ್ದರೂ, ವಿಶ್ವಸಂಸ್ಥೆಯ ಈ ಮಾನವೀಯ ನೆರವಿನ ನೌಕೆಗಳ ಸಂಚಾರಕ್ಕೆ ಅನುವು ಮಾಡಿಕೊಡಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.ಈ ತಂಡದಲ್ಲಿ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಮಂಡಳಿ (UNCTAD), ಅಂತರಾಷ್ಟ್ರೀಯ ಸಮುದ್ರಯಾನ ಸಂಸ್ಥೆ (IMO) ಮತ್ತು ಅಂತರಾಷ್ಟ್ರೀಯ ವಾಣಿಜ್ಯ ಮಂಡಳಿ (ICC) ಪ್ರತಿನಿಧಿಗಳು ಇರಲಿದ್ದಾರೆ.








