ನವದೆಹಲಿ: ಭಾರತೀಯ ರೈಲ್ವೆಯ ಸಮಯಪಾಲನೆ (Punctuality) ಕುರಿತು ಸಂಸತ್ತಿನಲ್ಲಿ ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, 2025-2026ರ ಸಾಲಿನಲ್ಲಿ ಸಂಚರಿಸಿದ ಒಟ್ಟು ರೈಲುಗಳಲ್ಲಿ ಕೇವಲ ಶೇಕಡಾ 1.3ರಷ್ಟು ರೈಲುಗಳು ಮಾತ್ರ ಮೂರು ಗಂಟೆಗಿಂತ ಹೆಚ್ಚು ವಿಳಂಬವಾಗಿವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ರೈಲುಗಳ ಓಡಾಟದ ಸಮಯದಲ್ಲಿ ಗಣನೀಯ ಸುಧಾರಣೆಯಾಗಿದೆ. ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಒಟ್ಟಾರೆ ಸಮಯಪಾಲನೆಯು ಶೇ. 80ರಷ್ಟಿದೆ ಎಂದು ಸಚಿವರು ತಿಳಿಸಿದರು.ದಟ್ಟವಾದ ಮಂಜು (Foggy weather), ಹಳಿಗಳ ನಿರ್ವಹಣೆ (Asset Maintenance), ತುರ್ತು ಸರಪಳಿ ಎಳೆಯುವಿಕೆ (Alarm chain pulling) ಮತ್ತು ಹಳಿಗಳ ಮೇಲೆ ಜಾನುವಾರುಗಳು ಬರುವುದು ರೈಲುಗಳ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ವಿವರಿಸಿದರು.
ರೈಲುಗಳ ನಿಖರ ಸಮಯವನ್ನು ತಿಳಿಯಲು ಮತ್ತು ವಿಳಂಬವನ್ನು ಕಡಿಮೆ ಮಾಡಲು ಜಿಪಿಎಸ್ ಆಧಾರಿತ ‘ರಿಯಲ್-ಟೈಮ್ ಟ್ರೈನ್ ಇನ್ಫರ್ಮೇಷನ್ ಸಿಸ್ಟಮ್’ (RTIS) ಅನ್ನು ಹೆಚ್ಚಿನ ಇಂಜಿನ್ಗಳಲ್ಲಿ ಅಳವಡಿಸಲಾಗಿದೆ.ಮುಂಬರುವ ದಿನಗಳಲ್ಲಿ ‘ಕವಚ್’ (Kavach) ಸುರಕ್ಷತಾ ವ್ಯವಸ್ಥೆ ಮತ್ತು ಹಳಿಗಳ ಮೇಲ್ದರ್ಜೆಗೇರಿಸುವಿಕೆ ಕಾರ್ಯ ಪೂರ್ಣಗೊಂಡರೆ, ವಿಳಂಬದ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.








