ಬೆಂಗಳೂರು: ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಲೀಗ್ ಆದ ಐಪಿಎಲ್ (IPL 2026), ಈ ಬಾರಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈ ಬಾರಿಯ ಸೀಸನ್ ಅನ್ನು ಐಪಿಎಲ್ ಇತಿಹಾಸದ ‘ಅತಿದೊಡ್ಡ ಸೀಸನ್’ ಎಂದು ಬಣ್ಣಿಸಲಾಗುತ್ತಿದ್ದು, ಅಭಿಮಾನಿಗಳಲ್ಲಿ ಹಬ್ಬದ ಕಳೆ ಮನೆಮಾಡಿದೆ. 10 ಬಲಿಷ್ಠ ತಂಡಗಳು ಒಂದೇ ಗುರಿಯೊಂದಿಗೆ ಮೈದಾನಕ್ಕಿಳಿಯುತ್ತಿದ್ದು, ಈ ಬಾರಿ ಪಂದ್ಯಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.
ಈ ಬಾರಿ ಒಟ್ಟು 84 ಪಂದ್ಯಗಳು ನಡೆಯಲಿದ್ದು, ಕಳೆದ ಸೀಸನ್‌ಗಳಿಗಿಂತಲೂ ಸುದೀರ್ಘವಾಗಿ ಈ ಕ್ರಿಕೆಟ್ ಸಂಭ್ರಮ ನಡೆಯಲಿದೆ. ಆರ್ಸಿಬಿ, ಸಿಎಸ್ಕೆ, ಮುಂಬೈ ಇಂಡಿಯನ್ಸ್ ಸೇರಿದಂತೆ 10 ತಂಡಗಳು ಟ್ರೋಫಿಗಾಗಿ ಹೋರಾಡಲಿವೆ. ಪ್ರತಿಯೊಂದು ತಂಡಕ್ಕೂ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದೆ.
ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಿದರೆ, ಉಳಿದ ತಂಡಗಳು ಹೊಸ ಇತಿಹಾಸ ಬರೆಯಲು ಸಜ್ಜಾಗಿವೆ.
ಪಂದ್ಯಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ಲೇ-ಆಫ್ ತಲುಪುವ ಹಾದಿ ಈ ಬಾರಿ ಅಷ್ಟು ಸುಲಭವಿಲ್ಲ. ಪ್ರತಿ ಪಂದ್ಯವೂ ಅಂತಿಮ ಹಂತದವರೆಗೂ ಕುತೂಹಲ ಕೆರಳಿಸುವುದು ಖಚಿತ.








