ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳನ್ನು ಮುಖ್ಯವಾಹಿನಿಗೆ ತರಲು ಕರ್ನಾಟಕ ಸರ್ಕಾರವು ‘ಕೈಗಾರಿಕಾ ನೀತಿ 2025-30’ ಅಡಿಯಲ್ಲಿ ಹತ್ತು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ.
ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಬಲ್ಕಿಸ್ ಬಾನು ಅವರ ಪ್ರಶ್ನೆಗೆ ಉತ್ತರವಾಗಿ ಸರ್ಕಾರವು ಈ ಕೆಳಗಿನ ಪ್ರಮುಖ ಸೌಲಭ್ಯಗಳ ವಿವರಗಳನ್ನು ಹಂಚಿಕೊಂಡಿದೆ.
1. ಕೈಗಾರಿಕಾ ನೀತಿ 2025-30ರ ಪ್ರಮುಖ ಅಂಶಗಳು:
ಹೊಸ ನೀತಿಯಲ್ಲಿ ಹೂಡಿಕೆದಾರರಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ:
ಬಂಡವಾಳ ಹೂಡಿಕೆ ಹಾಗೂ ವಹಿವಾಟು ಆಧಾರಿತ ಸಹಾಯಧನ.
ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕದಲ್ಲಿ ರಿಯಾಯಿತಿ.
ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ವಿನಾಯಿತಿ ಹಾಗೂ ವಿದ್ಯುತ್ ಶಕ್ತಿ ಸಹಾಯಧನ.
ತಂತ್ರಜ್ಞಾನ ಅಳವಡಿಕೆ, ರಫ್ತು ಘಟಕಗಳು ಹಾಗೂ ಸುಸ್ಥಿರ ಕೈಗಾರಿಕೀಕರಣಕ್ಕೆ ವಿಶೇಷ ಪ್ರೋತ್ಸಾಹ.
2. ಎಸ್ಸಿ/ಎಸ್ಟಿ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗಾಗಿ ‘ವಿಶೇಷ ಘಟಕ ಯೋಜನೆ’ ಅಡಿ ಗಣನೀಯ ನೆರವು ನೀಡಲಾಗುತ್ತಿದೆ:
ಸಾಫ್ಟ್ ಸೀಡ್ ಕ್ಯಾಪಿಟಲ್ ನೆರವು: 10 ಕೋಟಿ ರೂ. ವರೆಗೆ ಹೂಡಿಕೆ ಮಾಡುವ ಘಟಕಗಳಿಗೆ ಗರಿಷ್ಠ 75 ಲಕ್ಷ ರೂ. ವರೆಗೆ ಸಾಫ್ಟ್ ಸೀಡ್ ಕ್ಯಾಪಿಟಲ್ ನೆರವು ಸಿಗಲಿದೆ. ಇದಕ್ಕೆ 4 ವರ್ಷಗಳ ‘ಮೊರಟೋರಿಯಂ’ ಅವಧಿ ಇರಲಿದ್ದು, ನಂತರದ 5 ವರ್ಷಗಳಲ್ಲಿ ಮರುಪಾವತಿ ಮಾಡಬಹುದು.
ನಿವೇಶನ ಹಂಚಿಕೆಯಲ್ಲಿ ರಿಯಾಯಿತಿ: KIADB ಅಥವಾ KSSIDC ವತಿಯಿಂದ ಹಂಚಿಕೆಯಾಗುವ ಗರಿಷ್ಠ 2 ಎಕರೆವರೆಗಿನ ನಿವೇಶನಗಳಿಗೆ 75% ರಷ್ಟು ಸಹಾಯಧನ ನೀಡಲಾಗುವುದು.
ಸಾಲದ ಮೇಲೆ 60% ಸಹಾಯಧನ: ಗುಡಿ ಮತ್ತು ಅತೀ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕ್ಗಳಿಂದ ಪಡೆಯುವ ಸಾಲದ ಮೇಲೆ 60% ರಷ್ಟು (ಗರಿಷ್ಠ 5 ಲಕ್ಷ ರೂ.ವರೆಗೆ) ಸಹಾಯಧನ ದೊರೆಯಲಿದೆ.
ವಿದ್ಯುತ್ ದರದಲ್ಲಿ ವಿನಾಯಿತಿ: ಹೊಸದಾಗಿ ಸ್ಥಾಪನೆಯಾದ ಘಟಕಗಳಿಗೆ ಮೊದಲ 5 ವರ್ಷಗಳ ಕಾಲ ಪ್ರತಿ ಯೂನಿಟ್ಗೆ 2 ರೂ.ಗಳಂತೆ ವಿದ್ಯುತ್ ಶಕ್ತಿ ಸಹಾಯಧನ ನೀಡಲಾಗುವುದು.
ಶುಲ್ಕಗಳ ಮರುಪಾವತಿ: KSFC ಅಥವಾ ಇತರೆ ಹಣಕಾಸು ಸಂಸ್ಥೆಗಳು ವಿಧಿಸುವ ಪರಿಶೀಲನಾ ಶುಲ್ಕ ಮತ್ತು ಕಾನೂನು ಶುಲ್ಕಗಳನ್ನು ಸರ್ಕಾರವೇ ಮರುಪಾವತಿಸಲಿದೆ.
3. ಸಣ್ಣ ಉತ್ಪಾದನಾ ಘಟಕಗಳಿಗೆ ಬಡ್ಡಿ ಸಹಾಯಧನ:
ಹೊಸ ಹೂಡಿಕೆಗಾಗಿ KSFC ಇಂದ ಸಾಲ ಪಡೆಯುವ ಅತೀ ಸಣ್ಣ ಮತ್ತು ಸಣ್ಣ ಉತ್ಪಾದನಾ ಕೈಗಾರಿಕೆಗಳಿಗೆ 6% ಬಡ್ಡಿ ಸಹಾಯಧನ ನೀಡುವ ಯೋಜನೆಯನ್ನು ಸರ್ಕಾರ ಮುಂದುವರಿಸಿದೆ. ಇದು ಕಟ್ಟಡ ಮತ್ತು ಯಂತ್ರೋಪಕರಣಗಳ ಮೇಲಿನ ಹೂಡಿಕೆಗೆ ಅನ್ವಯಿಸಲಿದ್ದು, ಉದ್ಯಮಿಗಳಿಗೆ ಆರ್ಥಿಕ ಹೊರೆ ತಗ್ಗಿಸಲಿದೆ.









