ನವದೆಹಲಿ: ಚೈತ್ರ ನವರಾತ್ರಿಯ ಪವಿತ್ರ ಒಂಬತ್ತನೇ ದಿನವಾದ ಇಂದು (ಮಾರ್ಚ್ 27, 2026, ಶುಕ್ರವಾರ) ದೇಶಾದ್ಯಂತ ‘ಮಹಾನವಮಿ’ಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ನವರಾತ್ರಿಯ ಉಪವಾಸವನ್ನು ಪೂರ್ಣಗೊಳಿಸುವ ಭಕ್ತರಿಗೆ ಇಂದು ಕನ್ಯಾ ಪೂಜೆ ಮಾಡಲು ಅತ್ಯಂತ ಶ್ರೇಷ್ಠ ದಿನವಾಗಿದೆ. ಇಂದೇ ಶ್ರೀರಾಮಚಂದ್ರನ ಜನ್ಮದಿನವಾದ ‘ರಾಮನವಮಿ’ಯನ್ನೂ ಆಚರಿಸಲಾಗುತ್ತಿರುವುದು ಈ ದಿನದ ಮಹತ್ವವನ್ನು ಹೆಚ್ಚಿಸಿದೆ.
ಮಹಾನವಮಿ ತಿಥಿ ಮುಕ್ತಾಯ: ಇಂದು ಬೆಳಿಗ್ಗೆ 10:06 ಗಂಟೆಗೆ ನವಮಿ ತಿಥಿ ಮುಕ್ತಾಯವಾಗಲಿದೆ.
ಕನ್ಯಾ ಪೂಜೆಗೆ ಉತ್ತಮ ಸಮಯ: ಶಾಸ್ತ್ರಗಳ ಪ್ರಕಾರ ಸೂರ್ಯೋದಯದ ನಂತರದ ಬೆಳಗಿನ ಜಾವ ಕನ್ಯಾ ಪೂಜೆಗೆ ಅತ್ಯಂತ ಶುಭ. ಇಂದು ಬೆಳಿಗ್ಗೆ 6:15 ರಿಂದ 10:00 ಗಂಟೆಯ ಒಳಗೆ ಪೂಜೆ ಮುಗಿಸುವುದು ಅತ್ಯಂತ ಫಲದಾಯಕ ಎಂದು ಪಂಚಾಂಗ ತಿಳಿಸಿದೆ.
ಕನ್ಯಾ ಪೂಜೆಯ ಸಂಪೂರ್ಣ ವಿಧಿ-ವಿಧಾನ:
2 ರಿಂದ 10 ವರ್ಷದೊಳಗಿನ ಒಂಬತ್ತು ಬಾಲಕಿಯರನ್ನು (ನವದುರ್ಗೆಯರ ಸಂಕೇತವಾಗಿ) ಮನೆಗೆ ಗೌರವಪೂರ್ವಕವಾಗಿ ಆಹ್ವಾನಿಸಿ. ಜೊತೆಗೆ ಒಬ್ಬ ಬಾಲಕನನ್ನು (ಬಟುಕ ಭೈರವನ ಸಂಕೇತ) ಆಹ್ವಾನಿಸುವುದು ವಾಡಿಕೆ.
ಕನ್ಯೆಯರು ಮನೆಗೆ ಬಂದಾಗ ಅವರ ಪಾದಗಳನ್ನು ನೀರಿನಿಂದ ತೊಳೆದು, ಶುದ್ಧವಾದ ಆಸನದ ಮೇಲೆ ಕುಳ್ಳಿರಿಸಿ.ಬಾಲಕಿಯರ ಹಣೆ ಮೇಲೆ ಕುಂಕುಮದ ತಿಲಕವಿಟ್ಟು, ಕೈಗೆ ಕೆಂಪು ದಾರವನ್ನು (ಮೌಲಿ) ಕಟ್ಟಿ ಗೌರವಿಸಿ. ದೇವಿಗೆ ಅರ್ಪಿಸಿದ ಪುರಿ, ಕಡಲೆ ಕಾಳಿನ ಪಲ್ಯ (ಚನಾ), ಹಲ್ವಾ ಮತ್ತು ಹಣ್ಣುಗಳನ್ನು ಕನ್ಯೆಯರಿಗೆ ಪ್ರೀತಿಯಿಂದ ಬಡಿಸಿ.ಭೋಜನದ ನಂತರ ಕನ್ಯೆಯರಿಗೆ ಶಕ್ತಿಗನುಸಾರವಾಗಿ ದಕ್ಷಿಣೆ ಅಥವಾ ಉಡುಗೊರೆಗಳನ್ನು ನೀಡಿ, ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯಿರಿ.








