ನವದೆಹಲಿ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 2026ರ (IPL 2026) ಎರಡನೇ ಹಂತದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ಪ್ರಕಟಿಸಿದೆ. ದೇಶದ ವಿವಿಧೆಡೆ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬಾರಿ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಒಟ್ಟು 50 ಲೀಗ್ ಪಂದ್ಯಗಳು ನಡೆಯಲಿವೆ.
ಎರಡನೇ ಹಂತದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24, 2026 ರವರೆಗೆ ನಡೆಯಲಿವೆ.ಏಪ್ರಿಲ್ 13 ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯ್ಪುರ ಮತ್ತು ನ್ಯೂ ಚಂಡೀಗಢ ಸೇರಿದಂತೆ ಒಟ್ಟು 12 ನಗರಗಳಲ್ಲಿ ಪಂದ್ಯಗಳು ಜರುಗಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ಪಾಲಿನ ಪಂದ್ಯಗಳಲ್ಲಿ 3 ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತು 2 ಪಂದ್ಯಗಳನ್ನು ರಾಯ್ಪುರದಲ್ಲಿ ಆಡಲಿದೆ.
ಡಬಲ್ ಹೆಡರ್ಸ್: ಎರಡನೇ ಹಂತದಲ್ಲಿ ಒಟ್ಟು 8 ಡಬಲ್ ಹೆಡರ್ (ಒಂದೇ ದಿನ ಎರಡು ಪಂದ್ಯಗಳು) ಪಂದ್ಯಗಳಿರಲಿವೆ. ಮಧ್ಯಾಹ್ನದ ಪಂದ್ಯಗಳು 3:30ಕ್ಕೆ ಮತ್ತು ಸಂಜೆಯ ಪಂದ್ಯಗಳು 7:30ಕ್ಕೆ ಆರಂಭವಾಗಲಿವೆ.








