ಬೆಂಗಳೂರು : ವಾಹನಗಳ ತೆರಿಗೆ ಪರಿಷ್ಕರಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರವಾಗಿದೆ. ಈ ಕಾಯ್ದೆ ಜಾರಿಯಿಂದ 2026-27ನೇ ಸಾಲಿನಲ್ಲಿ ನೋಂದಣೆಯಾಗುವ ವಿವಿಧ ಬಗೆಯ ವಾಹನಗಳಿಂದ 250 ಕೋಟಿ ರೂ. ಸಂಗ್ರಹವನ್ನು ಸಾರಿಗೆ ಇಲಾಖೆ ನಿರೀಕ್ಷಿಸಿದೆ.
ಈಗ ತಿದ್ದುಪಡಿ ವಿಧೇಯಕ ಮೂಲಕ ರಾಜ್ಯದಲ್ಲಿ ಹೊಸ ವಾಹನಗಳ ನೋಂದಣಿ ತೆರಿಗೆಯನ್ನು ಇಳಿಸಲಾಗಿದೆ. ಅದರಂತೆ ರಾಜ್ಯದಲ್ಲಿ ನೋಂದಣಿಯಾಗುವ 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪಂದ ವಾಹನ ಹಾಗೂ ಸ್ಲೀಪರ್ ಕೋಚ್ ಬಸ್‌ಗಳಿಗೆ ಪ್ರತಿ ಆಸನಗಳಿಗೆ ಈಗಿರುವ ತೆರಿಗೆ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಅಂದರೆ ಕ್ರಮವಾಗಿ ಸಾವಿರ ರೂ.ಗಳಷ್ಟು ಇಳಿಕೆ ಮಾಡಲಾಗಿದೆ.
ಪ್ರಸ್ತುತ ಬಾಡಿಗೆಗೆ ಓಡಿಸುವ 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಪ್ರತಿ ಆಸನಕ್ಕೆ 3,500 ರೂ. ಹಾಗೂ ಸ್ಲೀಪರ್ ಕೋಚ್ ಬಸ್‌ಗಳಿಗೆ ಪ್ರತಿ ಆಸನಕ್ಕೆ 4,000 ರೂ. ತೆರಿಗೆ ಇದೆ. ಈಗ ಅದನ್ನು ಕ್ರಮವಾಗಿ 2,500 ರೂ. ಮತ್ತು 3,000 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಈ ವಿಧೇಯಕ ಮಂಡಿಸಿದರು.
ಹೊಸ ವಾಹನ ನೋಂದಣಿ ಸಮಯದಲ್ಲಿ ಮತ್ತು ಈಗಾಗಲೇ ನೋಂದಣೆಯಾಗಿರುವ ಮೋಟಾರು ವಾಹನ ಮತ್ತು ವಿದ್ಯುಚ್ಛಕ್ತಿ ಚಾಲಿತ ವಾಹನ ಮತ್ತು ವಾಣಿಜ್ಯ ಟ್ರ್ಯಾಕ್ಟರ್‌ಗಳಿಗೆ ಅಜೀವ ತೆರಿಗೆ ವಿಧಿಸಲಾಗಿದ್ದು, ಹೊರ ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನಗಳಿಗೆ ಪೂರ್ಣ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ. ರಾಜ್ಯದಲ್ಲಿನ ಅಧಿಕ ತೆರಿಗೆ ಹೊರೆ ತಪ್ಪಿಸುವುದಕ್ಕಾಗಿ ಅನೇಕ ಕಾರು ಮಾಲೀಕರು ನೆರೆ ರಾಜ್ಯಗಳಿಗೆ ಹೋಗಿ ತಮ್ಮ ಕಾರನ್ನು ನೋಂದಣಿ ಮಾಡುತ್ತಿದ್ದಾರೆ.
ರಾಜ್ಯಕ್ಕೆ ಹೋಲಿಕೆ ಮಾಡಿದರೆ ಪುದುಚೇರಿ, ಅರುಣಾಚಲ ಪ್ರದೇಶ, ದಿಯೂದಮನ್ ಮತ್ತಿತರ ರಾಜ್ಯಗಳಲ್ಲಿ ವಾಹನಗಳ ನೋಂದಣಿ ಶುಲ್ಕ ಮತ್ತು ತೆರಿಗೆ ತುಂಬಾ ಕಡಿಮೆ ಇದೆ. ಹಾಗಾಗಿ, ಸಾವಿರಾರು ವಾಹನಗಳು ಕಡಿಮೆ ತೆರಿಗೆ ಇರುವ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡು, ಕರ್ನಾಟಕದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವು. ಇದರ ಪರಿಣಾಮ ರಾಜ್ಯದಲ್ಲಿ ವಾಹನಗಳ ನೋಂದಣಿ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸರ್ಕಾರಕ್ಕೆ ಆದಾಯ ಕೂಡ ಖೋತಾ ಆಗುತ್ತಿದೆ.








