ಬೀಜಿಂಗ್: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಕಾರಣದಿಂದ ಅನಿವಾರ್ಯವಾಗಿ ಮುಂದೂಡಲ್ಪಟ್ಟಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುನಿರೀಕ್ಷಿತ ಚೀನಾ ಪ್ರವಾಸಕ್ಕೆ ಈಗ ಹೊಸ ಮುಹೂರ್ತ ಫಿಕ್ಸ್ ಆಗಿದೆ. ಶ್ವೇತಭವನದ ಅಧಿಕೃತ ಪ್ರಕಟಣೆಯ ಪ್ರಕಾರ, ಟ್ರಂಪ್ ಅವರು ಮೇ 14 ಮತ್ತು 15ರಂದು ಬೀಜಿಂಗ್‌ಗೆ ಭೇಟಿ ನೀಡಿ ಚೀನಾ ಅಧ್ಯಕ್ಷ ಶಿನಾ ಜಿನ್‌ಪಿಂಗ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ವಾಸ್ತವವಾಗಿ ಈ ಭೇಟಿಯು ಮಾರ್ಚ್ ಅಂತ್ಯದಲ್ಲಿ ನಡೆಯಬೇಕಿತ್ತು. ಆದರೆ ಫೆಬ್ರವರಿ 28ರಿಂದ ಆರಂಭವಾದ ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಟ್ರಂಪ್ ಅಮೆರಿಕದಲ್ಲೇ ಉಳಿಯುವುದು ಅನಿವಾರ್ಯವಾಗಿತ್ತು.
ಇಸ್ರೇಲ್ ಮತ್ತು ಅಮೆರಿಕದ ಜಂಟಿ ಕಾರ್ಯಾಚರಣೆಯನ್ನು ಖುದ್ದಾಗಿ ಮೇಲ್ವಿಚಾರಣೆ ನಡೆಸಲು ಟ್ರಂಪ್ ತಮ್ಮ ವಿದೇಶಿ ಪ್ರವಾಸವನ್ನು “ಒಂದು ತಿಂಗಳ ಕಾಲ” ಮುಂದೂಡುವಂತೆ ಚೀನಾಗೆ ಮನವಿ ಮಾಡಿದ್ದರು.
2017ರ ನಂತರ ಅಮೆರಿಕದ ಅಧ್ಯಕ್ಷರೊಬ್ಬರು ಚೀನಾಗೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ.ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ ಮಾಡಿಕೊಂಡಿದ್ದ ತಾತ್ಕಾಲಿಕ ‘ವ್ಯಾಪಾರ ಕದನ ವಿರಾಮ’ವನ್ನು (Trade Truce) ಕಾಯಂ ಒಪ್ಪಂದವನ್ನಾಗಿ ಪರಿವರ್ತಿಸುವ ಗುರಿಯನ್ನು ಈ ಭೇಟಿ ಹೊಂದಿದೆ.
ಇರಾನ್‌ನ ಅತಿದೊಡ್ಡ ತೈಲ ಗ್ರಾಹಕ ಚೀನಾ ಆಗಿರುವುದರಿಂದ, ಸಂಘರ್ಷವನ್ನು ಅಂತ್ಯಗೊಳಿಸಲು ಚೀನಾದ ಮೇಲೆ ಒತ್ತಡ ಹೇರುವುದು ಟ್ರಂಪ್ ಉದ್ದೇಶವಾಗಿದೆ.ಮೇ ತಿಂಗಳಲ್ಲಿ ಟ್ರಂಪ್ ಚೀನಾಗೆ ಭೇಟಿ ನೀಡಿದರೆ, ಪ್ರತಿಯಾಗಿ ಇದೇ ವರ್ಷದ ಅಂತ್ಯದಲ್ಲಿ ಜಿನ್‌ಪಿಂಗ್ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ.








