ಶಿವಮೊಗ್ಗ : ಜಿಲ್ಲೆಯ ಗಾಜನೂರು ಡಾ. ಕಾರುಣ್ಯ ಜೆ.ಜೆ. ಇವರು ಬೆಂಗಳೂರು ಅಮೆಜಾನ್ ಸೆಲ್ಲರ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಹರಿಯಾಣ ಗುರಂಗಾವ್ ಕ್ಲಿಕ್‌ಟೆಕ್ ರೀಟೈಲ್ ಪ್ರೈವೇಟ್ ಲಿಮಿಟೆಡ್ ಇವರ ಮೇಲೆ ಗುಣಮಟ್ಟ ಸರಿಯಿಲ್ಲದ ಲಿಟ್‌ಮ್ಯಾನ್ ಸ್ಟೆತೋಸ್ಕೋಪ್ ನೀಡಿದ್ದು, ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ವಕೀಲ ಮೂಲಕ ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು 2023ರ ನವೆಂಬರ್‌ನಲ್ಲಿ ಅಮೆಜಾನ್ ಸೆಲ್ಲರ್‌ನಿಂದ ಲಿಟ್‌ಮ್ಯಾನ್ ಸ್ಟೆತೋಸ್ಕೋಪ್ ಆನ್‌ಲೈನ್ ಮೂಲಕ ರೂ. 10,024/-ಗಳನ್ನು ಪಾವತಿಸಿ ಬುಕ್ ತರಿಸಿದ್ದು, ಇದರ ಗುಣಮಟ್ಟ ಸರಿಯಿಲ್ಲದ್ದರಿಂದ ವಾಪಾಸ್ಸು ಮಾಡಿರುತ್ತಾರೆ. ಆದರೆ 3 ರಿಂದ 10 ದಿನಗಳೊಳಗಾಗಿ ಹಣ ವಾಪಸ್ಸು ಮಾಡಲಾಗುವುದೆಂದು ತಿಳಿಸಿದ್ದರೂ, ಹಣ ವಾಪಸ್ಸು ಮಾಡದಿದ್ದರಿಂದ ಲೀಗಸ್ ನೋಟೀಸ್‌ಗೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ದೂರನ್ನು ದಾಖಲಿಸಿಕೊಂಡು ಎರಡೂ ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ಆಯೋಗಕ್ಕೆ ಹಾಜರಾಗದಿರುವುದರಿಂದ ಏಕಪಕ್ಷೀಯವಾಗಿ ಆದೇಶವಾಗಿದ್ದು, ಆಯೋಗವು ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಸ್ಟೆತೋಸ್ಕೋಪ್ ಅನ್ನು ಹಿಂಪಡೆದು, ಹಣವನ್ನು ಹಿಂತಿರುಗಿಸದೆ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ಪಡೆದಿರುವ ರೂ. 10024/- ಗಳಿಗೆ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ 2025ರ ಏಪ್ರಿಲ್ ರೀಮದ ಅನ್ವಯವಾಗುವಂತೆ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 15,000/- ಗಳನ್ನು ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ. 17 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.








