ನವದೆಹಲಿ: ಮೊಬೈಲ್ ರೀಚಾರ್ಜ್ ವಿಚಾರದಲ್ಲಿ ಗ್ರಾಹಕರಿಗೆ ಆಗುತ್ತಿರುವ ‘ಅನ್ಯಾಯ’ವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಈಗ ಗಂಭೀರ ಕ್ರಮಕ್ಕೆ ಮುಂದಾಗಿದೆ. ಸಾಮಾನ್ಯವಾಗಿ ತಿಂಗಳ ಪ್ಲಾನ್ ಎಂದು ಕರೆಸಿಕೊಳ್ಳುವ ರೀಚಾರ್ಜ್‌ಗಳು ಕೇವಲ 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತವೆ. ಇದರಿಂದಾಗಿ ಗ್ರಾಹಕರು ವರ್ಷಕ್ಕೆ 12ರ ಬದಲಿಗೆ 13 ಬಾರಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆಯನ್ನು ಹೋಗಲಾಡಿಸಲು 30 ದಿನಗಳ ಪೂರ್ಣ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.
ಒಂದು ತಿಂಗಳಿಗೆ 30 ಅಥವಾ 31 ದಿನಗಳಿದ್ದರೂ, ಟೆಲಿಕಾಂ ಕಂಪನಿಗಳು 28 ದಿನಗಳ ಪ್ಯಾಕ್ ನೀಡುತ್ತವೆ. ಇದರಿಂದ ಪ್ರತಿ ತಿಂಗಳು 2 ರಿಂದ 3 ದಿನಗಳು ಉಳಿಯುತ್ತವೆ. ಈ ಉಳಿದ ದಿನಗಳೆಲ್ಲಾ ಸೇರಿ ವರ್ಷದ ಕೊನೆಯಲ್ಲಿ ಗ್ರಾಹಕರು ಒಂದು ಹೆಚ್ಚುವರಿ ರೀಚಾರ್ಜ್ (13ನೇ ರೀಚಾರ್ಜ್) ಮಾಡಬೇಕಾಗುತ್ತದೆ.
ಈ ’28 ದಿನಗಳ ತಂತ್ರ’ದಿಂದಾಗಿ ಟೆಲಿಕಾಂ ಕಂಪನಿಗಳು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹೆಚ್ಚುವರಿ ಆದಾಯ ಗಳಿಸುತ್ತಿವೆ ಎಂದು ರಾಜ್ಯಸಭೆಯಲ್ಲಿ ಸಂಸದ ರಾಘವ್ ಚಡ್ಡಾ ಇತ್ತೀಚೆಗೆ ಧ್ವನಿ ಎತ್ತಿದ್ದರು.








