ಬೆಂಗಳೂರು: ಶಾಲಾ ಮಕ್ಕಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ವಾಟ್ಸಾಪ್ ಮೂಲಕ ಮಕ್ಕಳಿಗೆ ಹೋಮ್ವರ್ಕ್ (ಮನೆಗೆಲಸ) ಕಳುಹಿಸುವ ಪದ್ಧತಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಯೋಗವು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಮಕ್ಕಳಿಗೆ ನೀಡುವ ಹೋಮ್ವರ್ಕ್ಗಳನ್ನು ಕಡ್ಡಾಯವಾಗಿ ಶಾಲಾ ಡೈರಿಯಲ್ಲೇ ಬರೆಸಬೇಕು. ಮೊಬೈಲ್ ಅಥವಾ ವಾಟ್ಸಾಪ್ ಅನ್ನು ಹೋಮ್ವರ್ಕ್ ನೀಡಲು ಮೂಲ ಸಾಧನವಾಗಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
ವಾಟ್ಸಾಪ್ ಬಳಕೆ ಎಲ್ಲಿವರೆಗೆ?
ಶಾಲಾ ವಾಟ್ಸಾಪ್ ಗ್ರೂಪ್ಗಳನ್ನು ಕೇವಲ ತುರ್ತು ಮಾಹಿತಿ, ಸಾಮಾನ್ಯ ಶೈಕ್ಷಣಿಕ ಸೂಚನೆಗಳು ಮತ್ತು ಶಾಲಾ ಪ್ರಕಟಣೆಗಳಿಗಾಗಿ ಮಾತ್ರ ಬಳಸಲು ಅವಕಾಶ ನೀಡಲಾಗಿದೆ.
ಪೋಷಕರ ಅನುಮತಿ ಕಡ್ಡಾಯ
ಮಕ್ಕಳ ಫೋಟೋ ಅಥವಾ ವಿಡಿಯೋಗಳನ್ನು ಯಾವುದೇ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮುನ್ನ ಪೋಷಕರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯುವುದು ಕಡ್ಡಾಯಗೊಳಿಸಲಾಗಿದೆ.
ಕಟ್ಟುನಿಟ್ಟಿನ ಕ್ರಮ: ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಈ ಬಗ್ಗೆ ವರದಿ ನೀಡುವಂತೆ ಇಲಾಖೆಗೆ ಸೂಚಿಸಲಾಗಿದೆ.
ಮಕ್ಕಳು ಅತಿಯಾಗಿ ಮೊಬೈಲ್ ಬಳಕೆಗೆ ದಾಸರಾಗುವುದನ್ನು ತಪ್ಪಿಸುವುದು ಮತ್ತು ಪಠ್ಯಪುಸ್ತಕ, ಡೈರಿ ಹಾಗೂ ನೇರ ಬೋಧನಾ ವಿಧಾನದಂತಹ ಸಾಂಪ್ರದಾಯಿಕ ಶೈಕ್ಷಣಿಕ ಪರಿಕರಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.








