ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಆಕಾಂಕ್ಷಿಗಳಾಗಿರುವ ಯುವಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪೊಲೀಸ್ ನೇರ ನೇಮಕಾತಿಗಳಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಕಾಲ ಸಡಿಲಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ.
ಸಡಿಲಿಕೆ ಅವಧಿ: ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಿನಾಯಿತಿ ನೀಡಲಾಗಿದೆ. ಈ ಸಡಿಲಿಕೆಯು ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳಿಂದ ಹಿಡಿದು ಡಿಸೆಂಬರ್ 31, 2027ರವರೆಗೆ ಹೊರಡಿಸಲಾಗುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗಲಿದೆ.
ಯಾರಿಗೆ ಲಾಭ?: ಪೊಲೀಸ್ ಇಲಾಖೆಯ ವಿವಿಧ ವೃಂದಗಳ ನೇರ ನೇಮಕಾತಿಗಾಗಿ ಕಾಯುತ್ತಿರುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ.
ಕೊರೊನಾ ನಂತರದ ದಿನಗಳಲ್ಲಿ ಮತ್ತು ಇತರ ತಾಂತ್ರಿಕ ಕಾರಣಗಳಿಂದ ನೇಮಕಾತಿ ವಿಳಂಬವಾಗಿದ್ದರಿಂದ ಅನೇಕ ಅಭ್ಯರ್ಥಿಗಳು ವಯೋಮಿತಿ ಮೀರಿ ಅವಕಾಶ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ಸಾವಿರಾರು ನಿರುದ್ಯೋಗಿ ಯುವಕರಿಗೆ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ.








